9:33 AM Monday28 - July 2025
ಬ್ರೇಕಿಂಗ್ ನ್ಯೂಸ್
ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;…

ಇತ್ತೀಚಿನ ಸುದ್ದಿ

ಪದ್ಮಶ್ರೀ ಮಂಜಮ್ಮ ಜೋಗತಿ ಜೀವಾನಾಧಾರಿತ ‘ಮಾತಾ’ ಏಕವ್ಯಕ್ತಿ ನಾಟಕ ಪ್ರದರ್ಶನ

05/09/2023, 14:32

ಉಡುಪಿ(reporterkarnataka.com): ತೃತೀಯ ಲಿಂಗಿಯಾಗಿ ನಿರಂತರ ಸಂಘರ್ಷ ಜೀವನ ನಡೆಸಿ, ತನ್ನಂತಹ ಶೋಷಿತರ ಧ್ವನಿಯಾದ ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಅವರಂತಹ ತೊಳಲಾಟದ ಮಂದಿಗೆ ಜೀವನ ಪಾಠವಾಗಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ, ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಸಹಕಾರದಲ್ಲಿ ಡಾ.ಮಂಜಮ್ಮ ಜೋಗತಿ ಜೀವಾನಾಧಾರಿತ ಏಕವ್ಯಕ್ತಿ ನಾಟಕ `ಮಾತಾ ‘ ಪ್ರದರ್ಶನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಸಮಾನತೆ, ಗೌರವಯುತವಾಗಿ ಜೀವನ ನಡೆಸಲು ಉದ್ಯೋಗಾವಕಾಶಗಳು ಸಿಗಬೇಕು. ಅವರದಲ್ಲದ ತಪ್ಪಿಗೆ ಅವರ ಬದುಕು ಹೊರೆಯಂತೆ ಅನಿಸಬಾರದು. ಈ ನಿಟ್ಟಿನಲ್ಲಿ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಒಂದು ಆದರ್ಶಪ್ರಾಯ. ತನ್ನಂತಹ ತೃತೀಯ ಲಿಂಗಿಗಳಿಗೆ ಗಟ್ಟಿ ಧ್ವನಿಯಾಗಿ ಅವರ ಕಣ್ಣೊರೆಸುವ ಮಾತೆಯಾಗಿ ಡಾ.ಮಂಜಮ್ಮ ಜೋಗತಿ ಆದರ್ಶಪ್ರಾಯರಾಗಿದ್ದಾರೆ. ಸಮಾಜದ ಒಳಿತಿಗಾಗಿ ಇಂತಹ ಆದರ್ಶಪ್ರಾಯರ ಜೀವನಾಧಾರಿತ ಕಥೆಯನ್ನು ರಂಗಭೂಮಿಗೆ ತಂದಿರುವ ಪ್ರಯತ್ನ ಶ್ಲಾಘನೀಯ ಎಂದು ಅವರು ತಿಳಿಸಿದರು.
ಮಂತ್ರ ಮಾಂಗಲ್ಯದಂತೆ ಸಮಾನತೆಯ ಸೀಮಂತ ನಡೆಯಲಿ: ತನ್ನ ೪೦ ವರ್ಷದ ಬದುಕನ್ನು ೮೦ ನಿಮಿಷಕ್ಕಿಳಿಸಿ ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಡಾ.ಮಂಜಮ್ಮ ಜೋಗತಿ ತಿಳಿಸಿದರು.
ತೃತೀಯ ಲಿಂಗಿಗಳು ತಮ್ಮಿಷ್ಟದ ಬದುಕನ್ನು ಬಾಳುವ ಅವಕಾಶ ಸಮಾಜ ಕಲ್ಪಿಸಬೇಕು. ತೃತೀಯ ಲಿಂಗಿಗಳಿಗೆ ಗೌರವ ಕೊಡಿ. ತಿರಸ್ಕಾರ ಮಾಡಬೇಡಿ. ಶಿಕ್ಷಣ, ಉದ್ಯೋಗ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸ ಸಮಾಜದಿಂದ ನಡೆಯಬೇಕು. ಇಂದು ೩ ಮಂದಿ ತೃತೀಯ ಲಿಂಗಿಗಳು ಶಿಕ್ಷಕರಾಗಿದ್ದಾರೆ. ಪೊಲೀಸರಾಗಿದ್ದಾರೆ. ಆಟೋ ಓಡಿಸುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಸಮಾಜ ನಮ್ಮನ್ನು ಒಪ್ಪಿಕೊಳ್ಳಬೇಕು. ಪ್ರಮುಖವಾಗಿ ತೃತೀಯ ಲಿಂಗಿಗಳಾಗಿ ಬದಲಾದ ತಮ್ಮ ಮಗ ಅಥವಾ ಮಗಳನ್ನು ತಂದೆತಾಯಿ ಎಲ್ಲಾ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡರೆ ಅವರು ಬೀದಿ ಪಾಲಾಗುವ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ಭಾವುಕರಾಗಿ ನುಡಿದರು. ಕವಿ ಕುವೆಂಪು ಅವರ `ಮಂತ್ರ ಮಾಂಗಲ್ಯ’ದoತೆ ನಮ್ಮ ಸಮಾಜದಲ್ಲಿ `ಸಮಾನತೆಯ ಸೀಮಂತ ‘ ನಡೆಯಬೇಕು. ತನಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವುದು ನನ್ನಂತಹ ತೃತೀಯ ಲಿಂಗಿ ಸಮುದಾಯಕ್ಕೆ ಸಂದ ಗೌರವ, ಜಾನಪದ ಕಲಾವಿದರಿಗೆ ಸಂದ ಗೌರವ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಉದ್ಘಾಟಿಸಿ, ಶುಭ ಹಾರೈಸಿದರು. ರೋಟರಿ ಜಿಲ್ಲೆ ೩೧೮೨ ಜಿಲ್ಲಾ ಮಾಜಿ ಗವರ್ನರ್ ಡಾ.ಎಚ್.ಜೆ.ಗೌರಿ, ರೋಟರಿ ಉಡುಪಿ ಅಧ್ಯಕ್ಷೆ ದೀಪಾ ಭಂಡಾರಿ ಸಂದರ್ಭೋಚಿತವಾಗಿ ಮಾತನಾಡಿದರು.
ಎಂಜಿಎo ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ಉಪಸ್ಥಿತರಿದ್ದರು.
ನಾಟಕದ ರಚನೆಕಾರ ಬೇಲೂರು ರಘುನಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ ಸರಸ್ವತಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಕೆ.ಸ್ವರಾಜ್ಯ ಲಕ್ಷ್ಮೀ ಅಲೆವೂರು ವಂದಿಸಿದರು. ಜಯಭಾರತಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಲಾವಿದ ಅರುಣ್ ಕುಮಾರ್ ಅವರ ಏಕವ್ಯಕ್ತಿ ಅಭಿನಯದಲ್ಲಿ `ಮಾತಾ ‘ ನಾಟಕ ಪ್ರದರ್ಶನಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು