ಇತ್ತೀಚಿನ ಸುದ್ದಿ
ಪಡಿತರ ಪರದಾಟ: ರೇಶನ್ ಸಂಗ್ರಹಕ್ಕೆ ಸಾಸಲವಾಡ ಗ್ರಾಮಸ್ಥರು ಕ್ರಮಿಸಬೇಕು 2.5 ಕಿಮೀ ದೂರ!; ಜಿಲ್ಲಾಧಿಕಾರಿಗಳೇ ಕ್ರಮ ಕೈಗೊಳ್ಳಿ
29/09/2021, 10:45
ವಿ.ಜಿ.ವೃಷಭೇಂದ್ರ ಕೂಡ್ಲಿಗಿವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಹೆಗ್ಡಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸವಾಡ ಗ್ರಾಮಸ್ಥರು ಗ್ರಾಮದ ಪಲಾನುಭವಿಗಳ ಪಡಿತರ
ಸಾಮಗ್ರಿಗಳನ್ನು ಗ್ರಾಮದಲ್ಲಿಯೇ ವಿತರಿಸುವಂತೆ ಕ್ರಮಕ್ಕಾಗಿ ತಹಶೀಲ್ದಾರರಿಗೆ ಒತ್ತಾಯಿಸಿದ್ದಾರೆ, ಗ್ರಾಮದಲ್ಲಿ 275ಕ್ಕೂ ಹೆಚ್ಚು ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಪಡಿತರ ಸಾಮಗ್ರಿಗಳನ್ನು ಎರೆಡೂವರೆ ಕಿಮೀ ದೂರದ ಹೆಗ್ಡಾಳು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಹೊತ್ತು ತರಬೇಕಿದ್ದು, ವೃದ್ಧರು ಮಹಿಳೆಯರು ವಿಕಲಾಂಗರು ಪಡಿತರ ಹೊತ್ತು ತರುವುದು ಅಸಾಧ್ಯವಾಗಿದೆ.
ಪಡಿತರ ಸಾಮಗ್ರಿ ತರಲು ವಾಹನಗಳನ್ನು ಅವಲಂಬಿಸಿದ್ದು ಪ್ರತಿ ತಿಂಗಳೂ ಪಡಿತರ ತರಲು, ಪ್ರತಿಯೊಬ್ಬ ಪಲಾನುಭವಿ ವಾಹನಕ್ಕಾಗಿ 20ರಿಂದ 30 ರೂ. ವ್ಯಯಿಸಬೇಕಿದೆ.
ಸರ್ಕಾರ ಕೊಡೋ ಉಚಿತ ಪಡಿತರ ಸಾಮಾಗ್ರಿಗೆ ಇಲ್ಲಿ ಹಣ ವ್ಯಯ ಮಾಡಲೇಬೇಕಿದೆ,ಇದು ಆಹಾರ ಇಲಾಖೆಯ ಅವೈಜ್ಞಾನಿಕ ನಡೆಗೆ ಜೀವಂತ ಸಾಕ್ಷಿಯಾಗಿದೆ.
ಅನ್ಯಾಯ ಬೆಲೆ: ದೇವರು ಕೊಟ್ರೂ ಪೂಜಾರಿ ಕೊಡಲ್ಲೊಲ್ಲ ಎಂಬಂತೆ,ಸರ್ಕಾರ ಕಡು ಬಡವರಿಗೆ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಮಂಜೂರು ಮಾಡುತ್ತಿದೆ, ಆದ್ರೆ ಹಿರೇಹೆಗ್ಡಳು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅದು ಸುಳ್ಳಾಗಿದೆ ಎನ್ನುತ್ತಾರೆ ಪಲಾನುಭವಿಗಳು ಹಾಗೂ ಗ್ರಾಮಸ್ಥರು.ಸರ್ಕಾರ ಮಂಜೂರು ಮಾಡಿರುವ ಪ್ರಮಾಣದಂತೆ ಪಡಿತರ ವಿತರಿಸುತ್ತಿಲ್ಲ ಬೇಕಾ ಬಿಟ್ಟಿಯಾಗಿ ವಿತರಿಸಲಾಗುತ್ತಿದೆ,ಪ್ರತಿಯೊಬ್ಬರಿಂದ ತಲಾ 10-20 ರೂ. ಟೋಕನ್ ಗೆಂದು ವಸೂಲಿ ಮಾಡಲಾಗುತ್ತದೆ ಎಂದು ಸಾಸಲವಾಡದ ಗ್ರಾಮಸ್ಥರು ದೂರಿದ್ದಾರೆ. ಟೋಕನ್ ಗೆ ಹಾಗೂ ಪಡಿತರಕ್ಕಾಗಿ ಹೀಗೆ ಎರೆಡು ಬಾರಿ ಪ್ರತಿಯೊಬ್ಬರು ಪ್ರತಿ ತಿಂಗಳೂ ನ್ಯಾಯಬೆಲೆ ಕೇಂದ್ರಕ್ಕೆ ಅಲೆದಾಡಬೇಕಿದೆ. ಆಹಾರ ಸಾಮಗ್ರಿಗಳು ಸಂಪೂರ್ಣ ಕಲುಷಿತಗೊಂಡಿರುತ್ತದೆ ಹಾಗೂ ಕಸ ಮಿಶ್ರಿತವಾಗಿರುತ್ತದೆ. ನ್ಯಾಯ ಬೆಲೆ ಅಂಗಡಿಯ ನಿರ್ವಹಣೆ ಸಂಪೂರ್ಣ ಕಳಪೆಯಿದ್ದು ಕೂಡಲೇ ಬದಲಿಸಬೇಕೆಂದು ಸಾಸಲವಾಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿಯೇ ವಿತರಣೆಗೆ ಒತ್ತಾಯ: ಸಾಸಲವಾಡ ಗ್ರಾಮದಲ್ಲಿ ಪಡಿತರ ವಿತರಿಸುವಂತೆ ಕ್ರಮ ಕೈಗೊಳ್ಳಬೇಕಿದೆ, ಅದಕ್ಕಾಗಿ ಹಲವು ವರ್ಷಗಳಿಂದ ತಾಲೂಕಾಡಳಿತಕ್ಕೆ ಗ್ರಾಮದಿಂದ ಮನವಿ ಮಾಡಲಾಗಿದ್ದು. ತಹಶೀಲ್ದಾರರಾಗಲೀ, ಆಹಾರ ಇಲಾಖೆಯಾಗಲಿ ಈ ವರೆಗೂ ಸ್ಪಂದಿಸಿಲ್ಲ ಎಂದು ಸಾಸಲವಾಡ ಗ್ರಾಮಸ್ಥರು ತೀವ್ರ ಬೇಸರ ವ್ಯಕ್ತಪಡಸಿದ್ದಾರೆ.
ಕಾರಣ ತಾವು ತಹಶಿಲ್ದಾರರಲ್ಲಿ ಸಂಬಂದಿಸಿದಂತೆ ಈ ಮೂಲಕ ಅಂತಿಮವಾಗಿ ಮನವಿ ಮಾಡುತ್ತಿದ್ದು, ತಹಶಿಲ್ದಾರರು ಶೀಘ್ರವೇ ನ್ಯಾಯಬೆಲೆ ಅಂಗಡಿಯಲ್ಲಾಗುವ ಅನ್ಯಾಯಗಳನ್ನು ತಡೆಯಬೇಕಿದೆ.
ಸಾಸಲವಾಡ ಗ್ರಾಮದಲ್ಲಿಯೇ ಪಡಿತರ ಆಹಾರ ಸಾಮಾಗ್ರಿಗಳನ್ನು ವಿತರಿಸುವಂತೆ ಕ್ರಮ ಕೈಗೊಳ್ಳಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ತಾವು ಅನುಭವಿಸುತ್ತಿರುವ ತೊಂದರೆಗಳನ್ನು ವೀಡಿಯೋ ಮಾಡಿ ಸಾಕ್ಷಿ ಸಮೇತ ಜಿಲ್ಲಾಧಿಕಾರಿಗಳ ಮೊರೆ ಹೋಗಲಾಗುವುದು.
ಹೆಗ್ಡಾಳು ನ್ಯಾಯಬೆಲೆ ಅಂಗಡಿಯಲ್ಲಾಗುವ ಅನ್ಯಾಯಗಳನ್ನು ಹಾಗೂ ಅಕ್ರಮಗಳನ್ನು,ವೀಡಿಯೋ ಮಾಡಿ ಸಾಕ್ಷಿ ಪುರಾವೆ ಹಾಗೂ ದಾಖಲುಗಳ ಸಮೇತ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಸಾಸಲವಾಡ ಗ್ರಾಮದ ಮಹಿಳೆಯರು ಎಚ್ಚರಿಸಿದ್ದಾರೆ.
‘ಅ’ನ್ಯಾಯದಲ್ಲಿ ಆಹಾರ ಇಲಾಖೆಗೆ ಆಹಾರ.!?*- ರಾಜಾರೋಷವಾಗಿ ಈ ನ್ಯಾಯಬೆಲೆ ಅಂಗಡಿಯರು ಬಡವರ ಆಹಾರ ತಿಂದು ಅಕ್ರಮ ಎಸಗುತ್ತಿದ್ದಾರೆ,
ಇದನ್ನು ಮನಗಂಡೂ ಇಲಾಖೆ ಗಪ್ ಚುಪ್ ಆಹಾರ ಇಲಾಖೆ ಆಗಿರುವುದನ್ನು ಕಂಡರೆ ತಮ್ಮಲ್ಲಿ ಅಚ್ಚರಿ ಮೂಡಿಸಿದೆ.ಅನ್ಯಾಯ ಎಾಗುವ ಅಕ್ರಮಕೋರರು ತಮ್ಮ
ಅನ್ಯಾಯದ ಆಹಾರವನ್ನು ಆಹಾರ ಇಲಾಖೆಗೂ ಉಣಬಡಿಸಿದ್ದಾರೆಯೇ..!?ಎಂಬ ಅನುಮಾನ ಇದೆ ಎಂದು ಗ್ರಾಮದ ಕೆಲ ಮುಖಂಡರು ಶಂಕೆ ವ್ಯಕ್ತಪಡಿಸಿದ್ದಾರೆ.
ಅನ್ಯಾಯದ ವಿರುದ್ಧ ತಾವು ಸಾಕಷ್ಟು ಬಾರಿ ದೂರು ನೀಡಿಲಾಗಿದೆ. ಆಹಾರ ಇಲಾಖೆಯವರು ಕ್ರಮ ಕೈಗೊಳ್ಳಲಾಗದೇ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದು ಅವರು ಅ ನ್ಯಾಯಬೆಲೆ ಅಂಗಡಿಯವರ ಆಹಾರ ಸೇವಿಸಿದ್ದಾರೆನ್ನಲು ಸಾಕ್ಷಿಯಾಗಿದ್ದು, ನ್ಯಾಯಬೆಲೆ ಅಂಗಡಿಯಲ್ಲಿ ಜರುಗುವ ಪ್ರತಿ ಅನ್ಯಾಯಕ್ಕೆ ಅಧಿಕಾರಿಗಳು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಕ್ಟೋಬರ್ ಮಾಹೆಯ ಪಡಿತರ ಆಹಾರ ಸಾಮಗ್ರಿಗಳನ್ನು ಸಾಸಲವಾಡ ಗ್ರಾಮದಲ್ಲಿಯೇ ವಿತರಿಸುವಂತೆ ತಹಶಿಲ್ದಾರರು ಶೀಘ್ರವೇ ಕ್ರಮಕೈಗೊಳ್ಳಬೇಕಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜರುಗುತ್ತಿರುವ ಅನ್ಯಾಯ ಅಕ್ರಮಗಳನ್ನು ತಡೆಯಬೇಕು. ಸಂಪೂರ್ಣ ಉಚಿತವಾಗಿ ಪಡಿತರ ಆಹಾರ ಸಾಮಗ್ರಿ ವಿತರಿಸುವಂತೆ ತಹಶಿಲ್ದಾರರು ಕ್ರಮ ಕೈಗೊಳ್ಳಬೇಕೆಂದು, ಸಾಸಲವಾಡ ಗ್ರಾಮದ ಶಾರದಾ ಮಹಿಳಾ ಸಂಘ ಸೇರಿದಂತೆ ವಿವಿದ ಮಹಿಳಾ ಸಂಘಗಳ ಪದಾಧಿಕಾರಿಗಳು.
ಗ್ರಾಮಸ್ತರಾದ ಸುನಂದಮ್ಮ, ಗಿರಿಜಮ್ಮ, ನಾಗಮ್ಮ, ಕೊಟ್ರೇಶ,ವೀರಭದ್ರಪ್ಪ, ಶಿವಾನಂದಪ್ಪ, ಬಸಮ್ಮ,ಸುಲೋಚನಮ್ಮ,ಬಸವರಾಜ,ಮಲ್ಲಪ್ಪ,ರಾಜು ಸೇರಿದಂತೆ.ಗ್ರಾಮದ ಹಿರಿಯರು ಮತ್ತು ರೈತ ಹಾಗೂ ದಲಿತ ಪರ ವಿವಿದ ಸಂಘಟನೆಗಳ ಪದಾಧಿಕಾರಿಗಳು ತಹಶಿಲ್ದಾರರಲ್ಲಿ ಈ ಮೂಲಕ ಒತ್ತಾಯಿಸಿದ್ದಾರೆ.