ಇತ್ತೀಚಿನ ಸುದ್ದಿ
ನಮ್ಮ ಕಾಂಗ್ರೆಸ್ ಸರ್ಕಾರ ನಿಮ್ಮ ಹಣವನ್ನು ಮರಳಿ ನಿಮಗೆ ನೀಡುತ್ತಿದೆ: ಹೊಸಪೇಟೆ ಸಮಾವೇಶದಲ್ಲಿ ರಾಹುಲ್ ಗಾಂಧಿ
20/05/2025, 20:59

ಹೊಸಪೇಟೆ(reporterkarnataka.com): ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಎರಡು ವರ್ಷವನ್ನು ಪೂರೈಸಿದೆ. ನಮ್ಮ ಕಾಂಗ್ರೆಸ್ ಸರ್ಕಾರ ನಿಮ್ಮ ಹಣವನ್ನು ಮರಳಿ ನಿಮಗೆ ನೀಡುತ್ತಿದೆ. ನೀವು ಕಟ್ಟುವ ತೆರಿಗೆಯ ಹಣ ಮರಳಿ ನಿಮಗೆ ಸೇರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅದು ಯಶಸ್ವಿಯಾಗಿ ಈಡೇರಿದೆ ಎಂದು ಕಾಂಗ್ರೆಸ್ ನಾಯಕ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ರಾಜ್ಯ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ
ಹೊಸಪೇಟೆಯಲ್ಲಿ ನಡೆದ ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.
ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ನಂತರ ಈ ವಿಚಾರವಾಗಿ ಚರ್ಚೆ ಮಾಡುವ ವೇಳೆ ಕರ್ನಾಟಕದ ಜನರ ಭೂ ಮಾಲಿಕತ್ವದ ಬಗ್ಗೆ ಮಾತನಾಡಿದೆ. ಇಲ್ಲಿ ಹೆಚ್ಚು ಜನ ಭೂಮಿ ಹೊಂದಿದ್ದಾರೆ. ಆದರೆ ಮಾಲಿಕತ್ವ ಹೊಂದಿಲ್ಲ ಎಂಬುದು ನನಗೆ ಮನವರಿಕೆಯಾಗಿತ್ತು. ಪರಿಶಿಷ್ಟ, ಬುಡಕಟ್ಟು ಜನಾಂಗದವರು ವಾಸಿಸುವ ಅನೇಕ ಕಂದಾಯ ಗ್ರಾಮಗಳು ಗ್ರಾಮಗಳೇ ಎಂದು ಘೋಷಣೆಯಾಗಿರಲಿಲ್ಲ. ಇಲ್ಲಿನ ವಾಸಿಗಳಿಗೆ ಸರ್ಕಾರದ ಅನೇಕ ಸೌಲಭ್ಯಗಳು ಸೇರಿದಂತೆ ಅನೇಕ ಅನುಕೂಲಗಳು ನಿಮಗೆ ಈಗ ದೊರೆಯುತ್ತವೆ. ಈ ವಿಚಾರಗಳನ್ನು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಶಿವಕುಮಾರ್ ಅವರು ಸೇರಿದಂತೆ ಅನೇಕ ನಾಯಕರ ಬಳಿ ಚರ್ಚೆ ಮಾಡಿದೆ. ಈಗ ನಾನು ಆಲೋಚನೆ ಮಾಡಿದ ಯೋಜನೆ ಜಾರಿಗೆ ಬಂದಿದೆ. ಈ ದೇಶದ ಜನಸಾಮಾನ್ಯರ ಹೆಸರಿನಲ್ಲಿ ಭೂಮಿಯ ಮಾಲಿಕತ್ವ ಬರುತ್ತಿದೆ. ಇದು ನಮ್ಮ ಆರನೇ ಭೂ ಗ್ಯಾರಂಟಿ. ಇನ್ನೂ 500 ನೂತನ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದು ನಮ್ಮ ಸಂಕಲ್ಪ. ಕರ್ನಾಟಕದಲ್ಲಿ ಯಾರೂ ಸಹ ಭೂಮಿಯ ಮಾಲಿಕತ್ವ ಇಲ್ಲದೇ ಇರಬಾರದು ಎಂಬುದು ನಮ್ಮ ಆಶಯ. ಪತ್ರಿ ಊರಿನಲ್ಲಿ ಇರುವ ಗ್ಯಾರಂಟಿ ಸಮಿತಿಗಳು ಇಂತಹ ಭೂ ಮಾಲಿಕತ್ವ ಇಲ್ಲದ ಕುಟುಂಬಗಳಿಗೆ ಅವರ ಹಕ್ಕನ್ನು ಕೊಡಿಸುವ ಕೆಲಸ ಮಾಡಬೇಕು ಎಂದರು.
ಭೂ ಒಡೆತನದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಮೊಟ್ಟಮೊದಲ ರಾಜ್ಯವಾಗಿ ನಿಲ್ಲಲಿದೆ. ಯಾರಿಗೆ ಜಮಿನೀನ ಹಕ್ಕು ಇಲ್ಲವೋ ಅದನ್ನು ನೀಡುವುದು ನಮ್ಮ ಗುರಿ. ಈ ಮೂಲಕ ಆರನೇ ಗ್ಯಾರಂಟಿ ನೀಡುತ್ತಿದ್ದೇವೆ. ಇದು ಕರ್ನಾಟಕದ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಲಿದೆ ಎಂದು ರಾಹುಲ್ ಗಾಂಧಿ ನುಡಿದರು.
ಈ ದೇಶದ ಕೆಲವೇ ಕುಟುಂಬಗಳಿಗೆ ಮಾತ್ರ ನಿಮ್ಮ ತೆರಿಗೆ ಹಣ, ದೇಶದ ಸಂಪತ್ತು ಹೋಗಬೇಕು ಎನ್ನುವುದು ಬಿಜೆಪಿಯ ಧೋರಣೆ. ಆದರೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಆದಿವಾಸಿ ಹೀಗೆ ಎಲ್ಲಾ ವರ್ಗದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ನಿಮಗೆ ನೀಡಿದ ಹಣ ನೇರವಾಗಿ ಮಾರುಕಟ್ಟೆಗೆ ಹೋಗುತ್ತದೆ, ಮರಳಿ ಸರ್ಕಾರಕ್ಕೆ ಬರುತ್ತದೆ. ಹಳ್ಳಿ, ಹಳ್ಳಿಗಳಲ್ಲಿ ಹಣದ ಚಲಾವಣೆ ನಡೆಯುತ್ತದೆ. ಇದು ಕರ್ನಾಟಕದ ಆರ್ಥಿಕತೆಯ ಸಬಲತೆಗೆ ಪುಷ್ಟಿ ನೀಡುತ್ತದೆ ಎಂದು ಅವರು ನುಡಿದರು.
ಬಿಜೆಪಿ ಒಂದೆರಡು ಜನರಿಗೆ ಲಾಭ ಮಾಡಿ ನೀಡುವ ಹಣ ಈ ದೇಶದ ಒಳಗೆ ಖರ್ಚಾಗುವುದಿಲ್ಲ. ಬದಲಾಗಿ ಲಂಡನ್, ನ್ಯೂಯಾರ್ಕ್ ಹೀಗೆ ಬೇರೆ, ಬೇರೆ ದೇಶಗಳಲ್ಲಿ ಖರ್ಚು ಮಾಡಿ ಅಲ್ಲಿ ಆಸ್ತಿ ಖರೀದಿ ಮಾಡುತ್ತಾರೆ. ನಮ್ಮ ಕಾಂಗ್ರೆಸ್ ಯೋಜನೆಗಳಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಅವರಿಂದ ಉದ್ಯೋಗಗಳು ಮಾಯವಾಗುತ್ತವೆ. ಏನಾದರೂ ಆರ್ಥಿಕವಾಗಿ ಸಂಕಷ್ಟ ಎದುರಾದರೆ ಬಿಜೆಪಿ ಮಾಡೆಲ್ ಇಂದ ನಷ್ಟವೇ ಹೆಚ್ಚು. ನಮ್ಮ ಗ್ಯಾರಂಟಿ ಮಾಡೆಲ್ ನಿಂದ ನಿಮ್ಮ ಜೇಬಿನಲ್ಲಿ ಇರುವ ಹಣದಿಂದ ನೀವು ಜೀವನ ಸಾಗಿಸಬಹುದು. ನಿಮ್ಮ ಸಂಕಷ್ಟ ಕಾಲದಲ್ಲಿ ನಾವು ನಿಮಗೆ ಹಣ ನೀಡುತ್ತೇವೆ. ಅವರ ಮಾಡೆಲ್ ಅಲ್ಲಿ ಲಕ್ಷಾಂತರ ರೂಪಾಯಿ ಫೀ ಭರ್ತಿ ಮಾಡಿ ಖಾಸಗಿ ವಿವಿ, ಶಾಲೆಗಳಲ್ಲಿ ಓದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದರು.
ನಾವು ಚುನಾವಣೆ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ನಿಮಗಾಗಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆಗ ಬಿಜೆಪಿಯವರು, ಈ ದೇಶದ ಪ್ರಧಾನಿಯವರು ಈ ಭರವಸೆಗಳನ್ನು ಕಾಂಗ್ರೆಸ್ ಎಂದಿಗೂ ಈಡೇರಿಸುವುದಿಲ್ಲ ಎನ್ನುವ ಮಾತುಗಳನ್ನಾಡಿದ್ದರು. ಆದರೆ ನಾವು ಇಂದು ಕರ್ನಾಟಕದ ಬಡ ಜನರ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಸಾವಿರಾರು ಕೋಟಿ ಹಣ ನಿಮ್ಮ ಕೈ ಸೇರುತ್ತಿದೆ. ನಾವು ಮೊದಲ ಭರವಸೆಯಾಗಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದೆವು. ಕರ್ನಾಟಕದ ಮಹಿಳೆಯರ ಖಾತೆಗೆ ನಮ್ಮ ಸರ್ಕಾರ ನೇರವಾಗಿ ಹಣ ನೀಡುತ್ತಿದೆ. ಗೃಹಜ್ಯೋತಿ, ಶಕ್ತಿ ಯೋಜನೆ ಮೂಲಕ 3.5 ಕೋಟಿಯಷ್ಟಿರುವ ಮಹಿಳೆಯರು 500 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯದ ಮೂಲಕ 4 ಕೋಟಿಗೂ ಹೆಚ್ಚು ಜನರು 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಯುವನಿಧಿ ಹೀಗೆ ನಾವು ಮಾತು ಕೊಟ್ಟ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಎಂದು ರಾಹುಲ್ ಸಂತಸ ವ್ಯಕ್ತಪಡಿಸಿದರು.