ಇತ್ತೀಚಿನ ಸುದ್ದಿ
ಒಂದೇ ಕುಟುಂಬದ 4 ಮಂದಿ ನೀರು ಪಾಲು: 24 ತಾಸು ಕಳೆದರೂ ಘಟನಾ ಸ್ಥಳಕ್ಕೆ ಬಾರದ ಶಾಸಕ ಮಹೇಶ್ ಕುಮಟಳ್ಳಿ; ಗ್ರಾಮಸ್ಥರ ಆಕ್ರೋಶ
29/06/2021, 17:16
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿಯ ಕೃಷ್ಣಾ ನದಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರು ನೀರು ಪಾಲಾದ ಘಟನೆ ನಡೆದು 24 ತಾಸು ಕಳೆದರೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ಇಡೀ ಗ್ರಾಮವೇ ನೆರೆದರೂ ಜನರು ಆರಿಸಿ ಕಳುಹಿಸಿದ ಶಾಸಕರ ಸುಳಿವಿಲ್ಲ. ಇದರಿಂದ ಗ್ರಾಮಸ್ಥರು ಕೂಡ ಆಕ್ರೋಶಗೊಂಡಿದ್ದಾರೆ.
ಬಡ ದಲಿತ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರು ಸೋಮವಾರ ಮಧ್ಯಾಹ್ನ ಬಟ್ಟೆ ಒಗೆಯುತ್ತಿದ್ದ ವೇಳೆ ನೀರು ಪಾಲಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ನಡುಗು ಹೋಗಿತ್ತು. ಕುಟುಂಬಸ್ಥರ ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್, ತಹಶೀಲ್ದಾರ್, ಕಂದಾಯ ಅಧಿಕಾರಿಗಳು ದೌಡಾಯಿಸಿದ್ದರು. ಅಗ್ನಿಶಾಮಕ ದಳ, ಎನ್ ಡಿ ಆರ್ ಎಫ್ ತಂಡ, ಮುಳುಗು ತಜ್ಞರು ನಾನಾ ಕಡೆಗಳಿಂದ ಆಗಮಿಸಿದ್ದರು. ಆದರೆ ಜನರು ಮತ ಹಾಕಿ ಆರಿಸಿ ಕಳುಹಿಸಿದ ಜನಪ್ರತಿನಿಧಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತ್ರ ಇತ್ತ ಕಾಲು ಇಡಲೇ ಇಲ್ಲ.
ಶಾಸಕರು ಯಾವಾಗಲೂ ತುಂಬಾ ಬ್ಯುಸಿ ಇರುತ್ತಾರೆ. ಅವರಿಗೆ ಇಂತಹ ಚಿಲ್ಲರೆ ವಿಷಯಕ್ಕೆ ತಲೆ ಹಾಕಲು ಎಲ್ಲಿದೆ ಸಮಯ ಎಂದು ಗ್ರಾಮಸ್ಥರು ತಮಾಷೆ ಮಾಡುತ್ತಾರೆ. ವಾಸ್ತವದಲ್ಲಿ ಕೂಡ ಇದು ಹೌದು. ಸರಕಾರ ಕಟ್ಟುವುದು, ಸರಕಾರ ಬೀಳಿಸುವುವಲ್ಲಿ ಕೆಲವು ಶಾಸಕರು ಬ್ಯುಸಿಯಾಗಿರುತ್ತಾರೆ.