ಇತ್ತೀಚಿನ ಸುದ್ದಿ
ನ್ಯಾಯಾಂಗ ವ್ಯವಸ್ಥೆಯ ಮೂಲಸೌಕರ್ಯಕ್ಕಾಗಿ 800 ಕೋಟಿ ಅನುದಾನ: ಮುಖ್ಯಮಂತ್ರಿ ಬೊಮ್ಮಾಯಿ
22/08/2022, 15:35
ಬೆಂಗಳೂರು(reporterkarnataka.com):ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಸೌಕರ್ಯಕ್ಕಾಗಿ 800 ಕೋಟಿ ರೂ. ನೀಡಲು ಈಗಾಗಲೇ ಅನುಮತಿ ನೀಡಲಾಗಿದೆ. ಇದರಿಂದ ಕೆಳ ಹಂತದ ನ್ಯಾಯಾಲಯಗಳಿಗೆ ಅತ್ಯುತ್ತಮ ವ್ಯವಸ್ಥೆಗಳು ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿಗ್ಗಾಂವ್ ವಕೀಲರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಿದಂತೆ ನ್ಯಾಯಾಲಯಗಳು, ಅದರ ಸೌಕರ್ಯಗಳನ್ನು ಹೆಚ್ಚಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ
ನ್ಯಾಯಾಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಎಲ್ಲ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
ಭಾರತದ ನ್ಯಾಯಾಂಗ ವ್ಯವಸ್ಥೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗಕ್ಕೆ ಗೌರವ, ಅಧಿಕಾರ ಮತ್ತು ಜವಾಬ್ದಾರಿಯನ್ನು ನೀಡಲಾಗಿದೆ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾತ್ರವಲ್ಲ, ಲೋಕತಂತ್ರ, ಜನತಂತ್ರದ ಆಚರಣೆಯಾಗಿದೆ. ಈ ಲೋಕತಂತ್ರಕ್ಕೆ 75 ವರ್ಷ ಕಟ್ಟು ನಿಟ್ಟಾಗಿ ನಡೆದುಕೊಂಡು ಬಂದಿರುವುದರಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು ಎಂದರು.