2:32 PM Friday4 - October 2024
ಬ್ರೇಕಿಂಗ್ ನ್ಯೂಸ್
ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ ಶ್ರೀನಿವಾಸಪುರ ವಿದ್ಯಾರ್ಥಿಗಳ ವಸತಿ ನಿಲಯ ದುರವಸ್ಥೆ: ಉಪ ಲೋಕಾಯುಕ್ತರು ಗರಂ; ಸರಕಾರಿ ಆಸ್ಪತ್ರೆಗೂ… ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಪದವಿ ಪ್ರದಾನ; 23 ಮಂದಿ ವಿದ್ಯಾರ್ಥಿಗಳಿಗೆ… ಖಾಯಂ ಪಿಡಿಒ ನೇಮಕಕ್ಕೆ ಆಗ್ರಹಿಸಿ ತರುವೆ ಗ್ರಾ‌ಮ ಪಂಚಾಯಿತಿ ಎದುರು ಏಕಾಂಗಿ ಹೋರಾಟ

ಇತ್ತೀಚಿನ ಸುದ್ದಿ

ನಿಮ್ಮ ಮಗನಾ ಇವನು…? ಎಂದು ಪ್ರಶ್ನಿಸಿದಾಗ ಆ ಅಂಗಡಿ ಮಾಲೀಕರು ಸುಮ್ಮನೆ ನಕ್ಕು ಬಿಡುತ್ತಿದ್ದರು..

28/09/2024, 23:40

ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು

info.reporterkarnataka@gmail.com

ಯಾರೂ ಕಲಿಸಲಾಗದ ಪಾಠವನ್ನು ಬದುಕು ಕಲಿಸುತ್ತದೆ ಎಂಬುವುದು ಅಕ್ಷರಶಃ ಸತ್ಯ. ನಮ್ಮಕಥಾ ನಾಯಕನ ಪೂರ್ಣ ಹೆಸರು ರವಿಚಂದ್ರ, ಇದು ಶಾಲೆಯ ಹಾಜರಿ ಪಟ್ಟಿಯಲ್ಲಷ್ಟೇ ಕಾಣ ಸಿಗುವುದು. ಎಲ್ಲರ ಬಾಯಲ್ಲಿ ಓಡಾಡುವ ಹೆಸರು ರವಿ ಅಷ್ಟೇ. ಅಂದಿನ ಕಾಲದ ಬಡತನ ಮತ್ತು ಸಾಲುಸಾಲು ಮಕ್ಕಳ ಹಿಂಡಿನಲ್ಲಿ ನಾಲ್ಕನೆಯವನಾಗಿ ಹುಟ್ಟಿಬಂದ ಮುದ್ದಾದ ಮಗು ರವಿಚಂದ್ರ. ಆತನ ತಲೆತುಂಬಾ ಟೋಪಿ ಹಾಕಿದ್ದಂತೆ ಕಪ್ಪು ಗುಂಗುರು ಕೂದಲು, ಹಿತವಾದ ಮೈಬಣ್ಣ, ನಗುಮುಖದ ಮಗು ಅಮ್ಮನ ಕಣ್ಣಿಗೆ ಶ್ರೀಕೃಷ್ಣ ಪರಮಾತ್ಮನೇ. ಅಣ್ಣಂದಿರಿಗೂ ಆತ ಕೈಗೊಂಬೆ. ಅಲ್ಲಿಗೆ ಮುಗಿಯಲಿಲ್ಲ. ಇನ್ನೆರಡು ವರ್ಷಗಳಲ್ಲಿ ಸಾಲಾಗಿ ಇನ್ನೂ ಎರಡು ಹೆಣ್ಣು ಮಕ್ಕಳು ಮನೆತುಂಬ ಓಡಾಡಿದವು.
ಶಿಕ್ಷಕರಾಗಿದ್ದ ಅಪ್ಪನಿಗೆ ಬರುವ ಯಕಃಶ್ಚಿತ ಸಂಬಳದಲ್ಲಿ ಇಷ್ಟು ದೊಡ್ಡ ಸಂಸಾರವನ್ನು ಸಂಭಾಳಿಸುವುದು ಪ್ರಾಣಕ್ಕೆ ಬರುತ್ತಿತ್ತು. ಓದುವುದರಲ್ಲಿ ಜಾಣನಾಗಿದ್ದ ನಮ್ಮ ಕಥಾನಾಯಕನೂ ಅವನ ಅಣ್ಣಂದಿರಂತೆ ಹತ್ತನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸವನ್ನು ಪೂರೈಸಲು ಸಾಧ್ಯವಾಯಿತು. ಮೂವರು ಅಣ್ಣಂದಿರು ಚಿಕ್ಕ ಪುಟ್ಟ ಉದ್ಯೋಗ ಮಾಡಿಕೊಂಡು ಖರ್ಚಿಗೆ ಬೇಕಾದಷ್ಟು ಹಣ ಉಳಿಸಿಕೊಂಡು ಮಿಕ್ಕುಳಿದ ಹಣವನ್ನು ಮನೆಯ ಉಳಿದ ಹೊಟ್ಟೆಗಳನ್ನು ತುಂಬಿಸಲು ಸಹಾಯ ಮಾಡುತ್ತಿದ್ದರು. ಹಾಗೆಯೇ ಪ್ರೈವೇಟಾಗಿ ಓದಿ ಪರೀಕ್ಷೆ ಕಟ್ಟುತ್ತಿದ್ದರು. ಅಂತೂ ಇಬ್ಬರು ಡಿಗ್ರಿ ಮುಗಿಸಿದರೆ ಇನ್ನುಳಿದ ಚಿಣ್ಣರು ಹೈಸ್ಕೂಲ್ ಮಟ್ಟದಲ್ಲಿದ್ದರು.
ರವಿಗೆ ಮುಂದೆ ಕಾಲೇಜು ಸೇರಿ ಓದಲು ಆರ್ಥಿಕ ನೆರವು ಸಿಗದಿದ್ದರಿಂದ ಬದುಕೆಂಬ ಸಾಗರಕ್ಕೆ ಧುಮುಕಿದ.
ಅಲ್ಲಿಂದ ಅವನ ಪಯಣ ಶುರು. ಅದೇ ಊರಿನ ದೊಡ್ಡ ದಿನಸಿ ಅಂಗಡಿಯೊಂದರಲ್ಲಿ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿಕೊಂಡ. ಒಮ್ಮೊಮ್ಮೆ ಸಾಮಾನು ಕಟ್ಟಿಕೊಡುವ ಕೆಲಸವನ್ನೂ ಮಾಡಬೇಕಾಗುತ್ತಿತ್ತು. ಕಾಲೇಜು ಓದುತ್ತಿದ್ದ ಆತನ ಗೆಳೆಯರು ಏನಾದರೂ ಕೊಂಡುಕೊಳ್ಳಲು ಅಂಗಡಿಗೆ ಬಂದಾಗ ರವಿಯ ಜೀವ ಹಿಡಿಯಷ್ಟಾಗುತ್ತಿತ್ತು. ತರಗತಿಗೆ ಪ್ರಥಮ ಸ್ಥಾನ ಪಡೆಯುತ್ತಿದ್ದ ತಾನು ಈ ಸ್ಥಿತಿಯಲ್ಲಿರಬೇಕಾಯ್ತಲ್ಲಾ! ಎನಿಸಿದಾಗ ತಾನು ಸಂಪಾದಿಸುವ ಅಲ್ಪ ಮೊತ್ತವೂ ಮನೆಯವರ ಹೊಟ್ಟೆ ತುಂಬಿಸಲು ಕಿಂಚಿತ್ತಾದರೂ ಸಹಾಯಕ್ಕೆ ಬರುತ್ತದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದ. ಹೀಗೆಯೇ ಎರಡು ವರ್ಷ ಕಳೆಯಿತು. ರವಿಯ ಚಾಕಚಕ್ಯತೆಯನ್ನೂ ಪ್ರಾಮಾಣಿಕತೆಯನ್ನೂ ಗಮನಿಸಿದ ಅಂಗಡಿಯ ಮಾಲೀಕರ ತಲೆಯಲ್ಲೊಂದು ಯೋಚನೆ ಹೊಳೆಯಿತು. ಲೆಕ್ಕ ಬರೆಯಲು ಮತ್ತು ಸಾಮಾನು ಕಟ್ಟಿಕೊಡುವ ಕೆಲಸಕ್ಕಿಂತ ದೊಡ್ಡ ಜವಾಬ್ದಾರಿ ಹೊರುವ ಸಾಮರ್ಥ್ಯ ರವಿಯಲ್ಲಿರುವಾಗ ತಾನ್ಯಾಕೆ ಇನ್ನೊಂದು ಅಂಗಡಿ ತೆರೆದು ಅದನ್ನು ನಡೆಸುವ ಜವಾಬ್ದಾರಿ ಅವನಿಗೆ ವಹಿಸಿಕೊಡಬಾರದು? ಆ ಒಂದು ನಿರ್ಧಾರವನ್ನು ಯಜಮಾನರು ವ್ಯಕ್ತಪಡಿಸಿದಾಗ ರವಿಯ ಆತ್ಮವಿಶ್ವಾಸ ಬೆಳೆಯಿತು. ಅದೇ ಕ್ಷಣ ‘ಹೀಗೇ ತನ್ನ ಆಯುಸ್ಸನ್ನು ಕಳೆಯಬಾರದು,ಸಮಯ ಕೂಡಿ ಬಂದಾಗ ಏನಾದರೊಂದು ಮಹತ್ತರವಾದ ಸಾಧನೆಯನ್ನು ಸಾಧಿಸಬೇಕು’ ಎಂಬ ಛಲವೂ ಹುಟ್ಟಲು ಕಾರಣವಾಯಿತು.
ಮಾಲೀಕರಾದ ಕೇಶವ ಶೆಣೈಯವರು ಒಂದು ಶುಭಮುಹೂರ್ತ ದಲ್ಲಿ ಅದೇ ರಸ್ತೆಯ ಕೊನೆಯಲ್ಲಿ ಒಂದು ವಸ್ತ್ರದ ಮಳಿಗೆಯನ್ನು ಖರೀದಿಸಿದರು. ರವಿಯನ್ನು’ಶ್ರೀರಕ್ಷಾ ವಸ್ತ್ರಾಲಯ’ ದಲ್ಲಿ ಮೆನೇಜರ್ ಎಂದು ನೇಮಿಸಿದರು. ಅವನ ಕೈಕೆಳಗೆ ನಾಲ್ಕು ಸೇಲ್ಸ್‌ಮನ್ ಗಳೂ ಇದ್ದರು. ಆರಂಭೋತ್ಸವದ ದಿನ ಅವರ ಮಳಿಗೆಯಿಂದಲೇ ಧರಿಸಲು ಅವನಿಗೆ ಒಪ್ಪುವ ಬೆಲೆಬಾಳುವ ಪಂಚೆ ಮತ್ತು ಸಿಲ್ಕ್ ಜುಬ್ಬಾ ನೀಡಿದರು ಶೆಣೈಯವರು. ಚಂದದ ಯುವಕ ರವಿಯನ್ನು ನೋಡಿದ ಹೊಸಬರು “ನಿಮ್ಮ ಮಗನಾ ಇವನು? “ಎಂದು ಪ್ರಶ್ನಿಸಿದಾಗ ಶೆಣೈಯವರು ಸುಮ್ಮನೆ ನಕ್ಕು ಬಿಡುತ್ತಿದ್ದರು.ಅವರ ಮನಸ್ಸಿನೊಳಗೆ ತಮಗೆ ಗಂಡು ಮಕ್ಕಳಿಲ್ಲದ ಒಂದು ಚಿಕ್ಕ ಕೊರಗು ಇದ್ದೇ ಇತ್ತು.ಆ ಕೊರತೆಯನ್ನು ನೀಗಿಸಲೆಂದೇ ದೇವರು ಈ ಹುಡುಗನನ್ನು ಕಳಿಸಿದರೇನೋ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು.ರವಿಯ ಅಣ್ಣಂದಿರಿಗೆಲ್ಲಾ ಮದುವೆಯಾಯಿತು. ಕೆಲಸದ ನಿಮಿತ್ತ ಬೇರೆಬೇರೆ ಊರುಗಳಲ್ಲಿ ನೆಲೆಸಿದರು.ಚೆನ್ನಾಗಿ ಸಂಪಾದಿಸುತ್ತಿದ್ದ ರವಿ ತಂಗಿಯರ ಮದುವೆಯನ್ನು ವಿಜೃಂಭಣೆಯಿಂದ ಮಾಡಿ ಮುಗಿಸಿದ.ಶೆಣೈಯವರು ವಯೋಸಹಜ ಖಾಯಿಲೆಯಿಂದ ವ್ಯಾಪಾರದತ್ತ ಹೆಚ್ಚಿನ ಗಮನ ಕೊಡಲು ಸಾಧ್ಯವಿಲ್ಲ ಎಂದು ನಿವೃತ್ತಿ ಪಡೆಯುವ ನಿರ್ಧಾರ ತೆಗೆದುಕೊಳ್ಳಬಯಸಿದರು. ಜವಳಿ ಅಂಗಡಿ ಮಾರುವ ಅಭಿಪ್ರಾಯ ತಿಳಿಸಿದಾಗ ರವಿಯೇ ಧೈರ್ಯ ಮಾಡಿ ತನಗೇ ಬಿಟ್ಟು ಕೊಡುವಂತೆ ಕೇಳಿಕೊಂಡ. “ಅಷ್ಟೊಂದು ದೊಡ್ಡ ಮೊತ್ತದ ಹಣ ಹೇಗೆ ಕೊಡುತ್ತಿ?” ಎಂದು ಶೆಣೈಯವರು ಅಚ್ಚರಿಯಿಂದ ಕೇಳಿದರು. “ನನ್ನ ಅಣ್ಣಂದಿರು ಮತ್ತು ತಂಗಿಯರ ಮನೆಕಡೆಯವರೂ ಸೇರಿ ಬ್ಯಾಂಕ್ ನಿಂದ ಸಾಲತೆಗೆದು ಹಣ ಹೊಂದಿಸಲು ಒಪ್ಪಿಕೊಂಡಿದ್ದಾರೆ.ನಾನೂ, ನನ್ನ ಸಂಪಾದನೆಯ ಮೊತ್ತದಲ್ಲಿ ಉಳಿದ ಹಣವನ್ನು ಕೂಡಿಟ್ಟಿದ್ದೇನೆ. ಎಂದಾದರೊಂದು ದಿನ ಏನಾದರೂ ಹಿರಿದಾದ ಸಾಧನೆ ಮಾಡಬೇಕೆಂದು ನನಗೂ ಕನಸಿತ್ತು. ಬದುಕು ಒಡ್ಡಿದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀವು ನೀಡಿದಿರಿ.”ಎಂದ ವಿನಯದಿಂದ.ಕೇಶವ ಶೆಣೈಯವರು ಹೆಚ್ಚಿನ ಲಾಭವಿಟ್ಟುಕೊಳ್ಳದೆ ವಸ್ತ್ರ ಭಂಡಾರದ ಮಳಿಗೆಯನ್ನು ರವಿಗೆ ಬಿಟ್ಟು ಕೊಟ್ಟರು.
ಮರುದಿನ ಹೊಸ ನಾಮಫಲಕದಲ್ಲಿ’ ಮಾಲಿಕರು’ ಎಂಬ ಜಾಗದಲ್ಲಿ ‘ರವಿಚಂದ್ರ’ ಎಂಬ ಹೆಸರಿನೊಂದಿಗೆ, ಆತ ಕೈಮುಗಿದು ಸ್ವಾಗತಿಸುವ ಫೋಟೋವೂ,ಇನ್ನೊಂದು ಬದಿಯಲ್ಲಿ ಬದುಕು ಕಟ್ಟಿಕೊಳ್ಳಲು ದಾರಿದೀಪವಾದ ಕೇಶವ ಶೆಣೈಯವರ ಭಾವಚಿತ್ರವೂ ಮಳಿಗೆಯ ಶೋಭೆಯನ್ನು ಹೆಚ್ಚಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು