ಇತ್ತೀಚಿನ ಸುದ್ದಿ
ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ
09/01/2025, 17:12
ಬೆಂಗಳೂರು(reporterkarnataka.com): ರಾಜೀವ್ ಗಾಂಧಿ ವೈದ್ಯಕೀಯ ವಿವಿಯಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಮೊತ್ತವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯಗಳಿಗಾಗಿ ಒದಗಿಸಲು ಮತ್ತು ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಕೃಷ್ಣಾದಲ್ಲಿ ನಡೆದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದರು.
ಪ್ರಸ್ತುತ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗೆ ರೂ.400 ಕೋಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ರೂ.130 ಕೋಟಿ ಅನುದಾನ ಒದಗಿಸಲಾಗಿದೆ. ಈ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಸೂಚಿಸಿದರು.
2024-25ನೇ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ರೂ.4331 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಇದುವರೆಗೆ ರೂ.3099 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ರೂ.3005 ಕೋಟಿ ವೆಚ್ಚ ಮಾಡಲಾಗಿದ್ದು, ಬಿಡುಗಡೆ ಮೊತ್ತಕ್ಕೆ ಶೇ. 96.97 ಪ್ರಗತಿ ಸಾಧಿಸಲಾಗಿದೆ ಎಂದು ಸಚಿವರು ವಿವರಿಸಿದರು.
*ಸಭೆಯ ಮುಖ್ಯಾಂಶಗಳು…*
•2023-24 ಸಾಲಿನಲ್ಲಿ ಅನುಮೋದನೆಗೊಂಡು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಸಮಯದ ಒಳಗಾಗಿ ಪೂರ್ಣಗೊಳಿಸಬೇಕು.
•ಗದಗ, ಕೊಪ್ಪಳ, ಕಾರವಾರ,ಕೊಡಗು ಜಿಲ್ಲೆಗಳಲ್ಲಿ ನಿರ್ಮಾಣ ಹಂತದಲ್ಲಿರುವ 450 ಹಾಸಿಗೆ ಆಸ್ಪತ್ರೆಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ.
•ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಮೊತ್ತವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯಗಳಿಗಾಗಿ ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು.
•ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು.
•ಕ್ಯಾನ್ಸರ್ ಪ್ರಮಾಣ ಹೆಚ್ಚಳವಾಗಲು ಕಾರಣ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಕ್ಯಾನ್ಸರ್ ಚಿಕಿತ್ಸೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ರಾಜ್ಯದಲ್ಲಿಯೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು.