ಇತ್ತೀಚಿನ ಸುದ್ದಿ
ನೆಲದ ಕಾನೂನಿಗೆ ತಲೆ ಬಾಗುವುದೇ ನಿಜವಾದ ಆದರ್ಶ: ಪತ್ರಕರ್ತ ತಾರಾನಾಥ ಗಟ್ಟಿ ಅಭಿಮತ
07/03/2022, 11:47
ಮಂಗಳೂರು(reporterkarnataka.com): ಸ್ವಾತಂತ್ರ್ಯ ಸಂಗ್ರಾಮದ ಪರಂಪರೆ, ಹೋರಾಟಗಾರರ ತ್ಯಾಗವನ್ನು ಅರ್ಥಮಾಡಿಕೊಂಡು ಈ ನೆಲದ ಕಾನೂನುಗಳಿಗೆ ತಲೆಬಾಗುವುದೇ ನಾವು ಪಾಲಿಸಬಹುದಾದ ಬಹುದೊಡ್ಡ ಆದರ್ಶ,ಎಂದು ʼವಿ ಫೋರ್ʼ ನ್ಯೂಸ್ ಪ್ರಧಾನ ಸಂಪಾದಕ ತಾರಾನಾಥ್ ಗಟ್ಟಿ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ ರಾಜ್ಯ ಕೋಶ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಘಟಕಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾರತ- 75 ಕಾರ್ಯಕ್ರಮ ಹಾಗೂ ಅಪೌಷ್ಠಿಕ ಆಹಾರ ಹಾಗೂ ಲಿಂಗ ಅಸಮಾನತೆ ಬಗ್ಗೆ ವಿವಿ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಎಂಬುದು ಜನಸಾಮಾನ್ಯರ ನೂರಾರು ವರ್ಷಗಳ ಸುಧೀರ್ಘ ಹೋರಾಟದ ಫಲ, ಎಂದರಲ್ಲದೆ, 1837 ರಲ್ಲೇ ಕರಾವಳಿಯಲ್ಲಿ ನಡೆದಿದ್ದ ಕೊಡಗು-ಕೆನರಾ ರೈತ ದಂಗೆ, ಬಳಿಕ ಕೈಯೂರು ಹೋರಾಟಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ನಿರ್ದೇಶನಾಲಯದ ಯೂತ್ ಆಫೀಸರ್ ವೈ.ಎಂ.ಉಪ್ಪಿನ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ತೆರೆಮರೆಯ ಸಾಧಕರ ಕುರಿತು ಪ್ರಬಂಧ, ವೀಡಿಯೋ ಸ್ಪರ್ಧೆಗಳನ್ನು ಆಯೋಜಿಸಿ ಎನ್ಎಸ್ಎಸ್ ಸ್ವಾತಂತ್ರ್ದದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ, ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಎನ್ಎಸ್ಎಸ್ ಮಾತ್ರ ಮಹತ್ವದ್ದು, ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ ಮಾತನಾಡಿ, ಆದರ್ಶ ಪಾಲನೆಯನ್ನು ವಿದ್ಯಾರ್ಥಿಗಳ ವ್ಯಕ್ತಿತ್ವದ ಭಾಗವಾಗಿಸಲು ಎನ್ಎಸ್ಎಸ್ ಸಹಕಾರಿ, ಎಂದರು. “ನಾವೀಗ ಆತ್ಮನಿರ್ಭರ ಭಾರತವನ್ನು ರೂಪಿಸಬೇಕು. ಅಪೌಷ್ಠಿಕ ಆಹಾರ ಮತ್ತು ಲಿಂಗ ಅಸಮಾನತೆ ನಿವಾರಿಸುವಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಈ ಸಮಸ್ಯೆಗಳು ಸಮಾಜದಿಂದ ಸಂಪೂರ್ಣ ನಿರ್ಮೂಲನೆಯಾಗಬೇಕು,” ಎಂದರು.
ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್ ಆಯುರ್ವೇದ ಪ್ರಾಧ್ಯಾಪಕಿ ಡಾ. ಶಿಲ್ಪಾ ಹಾಗೂ ಸಂವಾದ ಯೂತ್ ರಿಸೋರ್ಸ್ ಸೆಂಟರ್ ಸಂಚಾಲಕಿ ಮಂಜುಳಾ ಸುನಿಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಭಾಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರೊ. ಪ್ರಶಾಂತ್ ನಾಯ್ಕ್ ಅವರ ಸಂಗ್ರಹದ ಸ್ವಾತಂತ್ರ್ಯ ಸಂಗ್ರಾಮ ಕುರಿತ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ನಾಗರತ್ನ ಕೆ ಎ ಪ್ರಾಸ್ತಾವಿಕವಾಗಿ ಮಾತನಾಡಿ ಎನ್ಎಸ್ಎಸ್ ಮೂರು ಜಿಲ್ಲೆಗಳ 20 ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಎಂದರು.
ಯೋಜನಾಧಿಕಾರಿಗಳಾದ ಸೀಮಾ ಪ್ರಭು,ಡಾ.ಗಾಯತ್ರಿ,ಸ್ವಾಗತಿಸಿ ಡಾ. ಸುರೇಶ್ ಧನ್ಯವಾದಿಸಿ, ರೋಶನ್ ವಿನ್ಸಿ ಸಾಂತುಮಾಯರ್ ಕಾರ್ಯಕ್ರಮ ನಿರೂಪಿಸಿದರು.