ಇತ್ತೀಚಿನ ಸುದ್ದಿ
ನೀತಿ ಸಂಹಿತೆ ಜಾರಿ: ದ.ಕ. ಜಿಲ್ಲೆಯಲ್ಲಿ ಕೋಲ, ನೇಮ ಸೇರಿದಂತೆ ಧಾರ್ಮಿಕ ಆಚರಣೆಗೆ ನಿರ್ಬಂಧ ಇಲ್ಲ
30/03/2023, 20:57
ಮಂಗಳೂರು(reporterkarnataka.com): ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಧಾರ್ಮಿಕ ಆಚರಣೆಗಳಿಗೆ ಯಾವುದೇ ನಿರ್ಭಂದ ಇರುವುದಿಲ್ಲ. ಆದರೆ ಯಾವುದೇ ರಾಜಕೀಯ ಮುಖಂಡರು ಪಾಲ್ಗೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜಿಲ್ಲೆಯ ಪ್ರಮುಖ ಕಲೆ ಯಕ್ಷಗಾನ, ಆರಾಧನೆ ಕೋಲ, ನೇಮ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ನಿರ್ಬಂಧ ಇರುವುದಿಲ್ಲ. ಆದರೆ, ಈ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು ಭಾಗವಹಿಸುವುದು, ಕಾರ್ಯಕರ್ತರಿಂದ ಪ್ರಚಾರ ನಡೆದು ದುರುಪಯೋಗ, ಮತದಾರರ ಓಲೈಕೆ ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮದುವೆ ಇನ್ನಿತರ ಸಮಾರಂಭಗಳನ್ನು ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ತೀವ್ರ ನಿಗಾ ಇಡಲಾಗುತ್ತದೆ.
ಚುನಾವಣಾ ಅಕ್ರಮ ತಡೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.
ಏ. 13ರಂದು ಚುನಾವಣೆಗೆ ನೋಟಿಸ್ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏ.20 ಕೊನೆಯ ದಿನ. 21ರಂದು ನಾಮಪತ್ರ ಪರಿಶೀಲನೆ, 24 ರಂದು ನಾಮಪತ್ರ ವಾಪಸ್ ಪಡೆಯುವ ಕೊನೆ ದಿನ. ಮೇ 10 ರಂದು ಮತದಾನ, 13 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ಮೇ 15 ರಂದು ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 17, 58647 ಮಂದಿ ಮತದಾರರಿದ್ದಾರೆ. 75 ಮಂದಿ ತೃತೀಯ ಲಿಂಗಿ ಮತದಾರರು ಇದ್ದಾರೆ. ಮತದಾನಕ್ಕೆ 1860 ಮತಗಟ್ಟೆಗಳನ್ನು ಆರಂಭಿಸಲಾಗುತ್ತದೆ. ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಒಬ್ಬ ಚುನಾವಣಾ ಅಧಿಕಾರಿ ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ಅವರನ್ನು ಚುನಾವಣಾ ನೋಡಲ್ ಅಧಿಕಾರಿ ಆಗಿ ಕಾರ್ಯ ನಿರ್ವಹಣೆ ಮಾಡಲಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಅಕ್ರಮ ತಡೆಯಲು ಮೊಬೈಲ್ ಚೆಕ್ ಪೊಸ್ಟ್ ಮಾಡಲಾಗಿದೆ. ಯಾರಾದರೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದಲ್ಲಿ, ಉಡುಗೊರೆ ನೀಡುವುದರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ. ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ದೂರುಗಳನ್ನು ಸಲ್ಲಿಸಲು ಸಿ- ವಿಜಿಲ್ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಈ ಆಪ್ ಮೂಲಕ ಜಿಲ್ಲೆಯ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಬಹುದು. ವಿಡಿಯೊ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಇದೇ ವೇಳೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸ್ಥಳ, ವೇದಿಕೆ ಅಥವಾ ತಾರಾ ಪ್ರಚಾರಕರನ್ನು ಕರೆಸಲು ಬಳಸುವ ಹೆಲಿಪ್ಯಾಡ್‌ಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲಾಗಿದೆ. ಪಕ್ಷಗಳು ಈ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ಅನುಮತಿ ಪಡೆಯಬೇಕಾಗುತ್ತದೆ. ಸುವಿಧಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ, ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಕೃಷ್ಣಮೂರ್ತಿ ಇದ್ದರು.