ಇತ್ತೀಚಿನ ಸುದ್ದಿ
ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿಎಸ್ ಟಿ ವಂಚನೆ ವಿರುದ್ಧ ಕ್ರಮ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
12/12/2024, 22:27
ಬೆಳಗಾವಿ (reporterkarnataka.com):ರಾಜ್ಯದಲ್ಲಿ ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿ.ಎಸ್.ಟಿ ವಂಚನೆ ಮಾಡದಂತೆ ತಡೆಯಲು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಂ. ನಾಗರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಜಿ.ಎಸ್.ಟಿ ವಂಚನೆಗಾಗಿಯೇ ನಕಲಿ ದಾಖಲಾತಿ ಸೃಷ್ಟಿಸಿ ಯಾವುದೇ ಸರಕುಗಳನ್ನು ಪೂರೈಸದೆ ನಕಲಿ ಇನ್ವಾಯ್ಸ್ ಸೃಷ್ಟಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಪ್ರಯತ್ನಿಸಿ 2437 ಕಂಪೆನಿಗಳು ಸಿಕ್ಕಿಬಿದ್ದಿವೆ ಎಂದರು.
ಈ ತೆರಿಗೆ ವಂಚನೆ ಅಕ್ರಮವನ್ನು ತಡೆಗಟ್ಟಲು ಸರ್ಕಾರದಿಂದ ನೇಮಕಗೊಂಡ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು 752 ಪ್ರಕರಣಗಳಲ್ಲಿ ತಪಾಸಣೆ ಭಾಗದ ಕೈಗೊಂಡಿದ್ದಾರೆ ಸದರಿ ಪ್ರಕರಣಗಳಲ್ಲಿ 429 ವಂಚನೆ ಪ್ರಕರಣಗಳಿಗೆ ನ್ಯಾಯನಿರ್ಣಯ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ. ಉಳಿದ ಪ್ರಕರಣ ಗಳು ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ಹಂತದಲ್ಲಿವೆ ಎಂದರು.
ನಕಲಿ ಇನ್ವಾಯ್ಸ್ ಗಳ ಮೂಲಕ ರಾಜ್ಯದ ತೆರಿಗೆ ಸೋರಿಕೆಯಾಗದಂತೆ ರಾಜ್ಯದ ಜಿ.ಎಸ್.ಟಿ. ಜಾರಿ ವಿಭಾಗದ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.














