8:32 AM Wednesday17 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ನರಹಂತಕ ಮೂಡಿಗೆರೆಯ ಭೈರ ಆನೆ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

11/12/2022, 23:05

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಇಬ್ಬರನ್ನು ಬಲಿ ಪಡೆದು, ಡ್ರೋನ್ ಕ್ಯಾಮರಕ್ಕೂ ಚಳ್ಳೆಹಣ್ಣು ತಿನ್ನಿಸಿ ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ಬೈರ ಆನೆಯನ್ನು ಭಾನುವಾರ ಸೆರೆ ಹಿಡಿಯಲಾಗಿದೆ.

ಕಳೆದ ನಾಲ್ಕೈದು ತಿಂಗಳಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿ ನೆಮ್ಮದಿ ಹಾಳು ಮಾಡಿದ್ದ ಒಂಟಿಸಲಗ, ನರಹಂತಕ ಕಾಡಾನೆ ಮೂಡಿಗೆರೆ ಭೈರನನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಾಲ್ಕೈದು ತಿಂಗಳಿಂದ ಮೂಡಿಗೆರೆ ತಾಲೂಕಿನಾದ್ಯಂತ ದಾಂಧಲೆ ನಡೆಸಿಕೊಂಡು ಇಬ್ಬರ ಜೀವ ತೆಗೆದಿದ್ದ ಭೈರನಿಂದ ಜನ ರೋಸಿ ಹೋಗಿ, ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಆನೆ ಹಾವಳಿಯಿಂದ ತಿಂಗಳಿಗೊಂದು ಹೆಣ ಬಿದ್ದ ಪರಿಣಾಮ ತಾಳ್ಮೆಗೆಟ್ಟು ಕಂಗೆಟ್ಟಿದ್ದ ಜನ ಶಾಸಕರ ಮೇಲೂ ಹಲ್ಲೆಗೆ ಮುಂದಾಗಿದ್ದರು. ಜನ ಯಾವಾಗ ಶಾಸಕರ ಮೇಲೆ ಹಲ್ಲೆಗೆ ಮುಂದಾದರೋ ಕೂಡಲೇ ಸರ್ಕಾರ ಮೂರು ಕಾಡಾನೆಗಳನ್ನ ಹಿಡಿಯಲು ಹಸಿರು ನಿಶಾನೆ ತೋರಿತ್ತು. ಸರ್ಕಾರ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಳೆದ ಎಂಟತ್ತು ದಿನಗಳಿಂದ ಆರು ಸಾಕಾನೆಗಳೊಂದಿಗೆ ಮೂರು ಕಾಡಾನೆಗಳನ್ನ ಹಿಡಿಯಲು ಅಧಿಕಾರಿಗಳು-ಸ್ಥಳಿಯರು ಹಗಲಿರುಳು ಕಷ್ಟ ಪಟ್ಟಿದ್ದರು. ಎರಡು ಕಾಡಾನೆಗಳನ್ನ ಸೆರೆ ಹಿಡಿದು ಮಡಿಕೇರಿಯ ಆನೆ ದುಬಾರೆ ಹಾಗೂ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆಬಿಡಾರಕ್ಕೆ ಬಿಟ್ಟಿದ್ದರು. ಆದರೆ, ಪುಂಡ, ಒಂಟಿಸಲಗ ಮೂಡಿಗೆರೆ ಭೈರ ಮಾತ್ರ ಎಲ್ಲರ ಕಣ್ತಪ್ಪಿಸಿ ನಾಪತ್ತೆಯಾಗುತ್ತಿದ್ದ. ಅರಣ್ಯ ಅಧಿಕಾರಿಗಳ ಡ್ರೋನ್ ಕ್ಯಾಮರಕ್ಕೂ ಕಣ್ತಪ್ಪಿಸಿ ದಟ್ಟಕಾನನದಲ್ಲಿ ಎಸ್ಕೇಪ್ ಆಗಿ ಓಡಾಡ್ತಿದ್ದ. ಆದರೆ, ಇಂದು ಮಧ್ಯಾಹ್ನ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ನರಹಂತಕನನ್ನ ಖೆಡ್ಡಾಕೆ ಬೀಳಿಸಿದ್ದಾರೆ. ಈ ಮೂಡಿಗೆರೆ ಭೈರನನ್ನ ಸೆರೆ ಹಿಡಿಯುವಷ್ಟರಲ್ಲಿ ಅರಣ್ಯ ಅಧಿಕಾರಿಗಳು ಕೂಡ ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಡ್ರೋನ್ ಕ್ಯಾಮರಕ್ಕೂ ಚಳ್ಳೆ ಹಣ್ಣು ತಿನ್ನಿಸುತ್ತಾ ದಟ್ಟ ಕಾನನದಲ್ಲಿ ಮಿಂಚಿನ ವೇಗದಲ್ಲಿ ಕಣ್ಮರೆಯಾಗುತ್ತಿದ್ದ ಈ ಭೈರ. ಅಧಿಕಾರಿಗಳ ಕಣ್ಣಿಗೆ ಕೂಡಲೇ ಅಧಿಕಾರಿಗಳು ಕೂಡ ಸಿದ್ಧತೆ-ಪ್ಲ್ಯಾನ್ ಮಾಡಿಕೊಳ್ಳುವಷ್ಟರಲ್ಲಿ ಕಾಡಿನಲ್ಲಿ ಮರೆಯಾಗುತ್ತಿದ್ದ. ನರಹಂತಕನಾಗಿ ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಮೂಡಿಗೆರೆ ಭೈರನ ಹೆಜ್ಜೆಗುರುತು : ನಾಲ್ಕೈದು ತಿಂಗಳಲ್ಲಿ ಈ ಮೂಡಿಗೆರೆ ಭೈರನ ಹೆಜ್ಜೆ ಗುರುತುಗಳು ಮಲೆನಾಡ ಮಣ್ಣಲ್ಲಿ ಅಚ್ಚಳಿಯದೆ ಉಳಿದಿವೆ. ಯಾಕಂದ್ರೆ, ಮಲೆನಾಡಲ್ಲಿ ದಶಕಗಳಿಂದ ಆನೆ ಹಾವಳಿ ಇದೆ. ಆದರೆ, ಜನರಿಗೆ ಹಾಗೂ ಅಧಿಕಾರಿಗಳಿಗೆ ಇವನಷ್ಟು ಯಾರೂ ಕಾಟ ಕೊಟ್ಟಿರಲಿಲ್ಲ. ಜೀವ ತೆಗೆದಿರಲಿಲ್ಲ. ಇವನ ಅಬ್ಬರಕ್ಕೆ ಎರಡು ತಿಂಗಳಲ್ಲಿ ಇಬ್ಬರು ಬಲಿಯಾಗಿದ್ದರು. ಕಳೆದ ತಿಂಗಳ ಹಿಂದಷ್ಟೆ ಮಹಿಳೆಯೊಬ್ಬಳು ಸಾವನ್ನಪ್ಪಿದ್ದರಿಂದ ಜನ ರೊಚ್ಚಿಗೆದ್ದು ಅರಣ್ಯ ಇಲಾಖೆಯ ಕಳ್ಳಭೇಟೆ ನಿಗ್ರಹ ಕಚೇರಿಯನ್ನ ದ್ವಂಸ ಮಾಡಿದ್ದರು. ಆನೆ ದಾಳಿಗೆ ಕಂಗೆಟ್ಟು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಇವನ ಕಾಟಕ್ಕೆ ಬೇಸತ್ತು ಅಧಿಕಾರಿಗಳು ಬೀದಿ-ಬೀದಿಯಲ್ಲಿ ಮೈಕ್ ಹಿಡಿದು ಅನೌನ್ಸ್ ಮಾಡಿದ್ದರು. ಒಂದು ಪುಂಡ ಕಾಡಾನೆ ಮಲೆನಾಡಿಗರಿಗೆ ಈ ಮಟ್ಟಕ್ಕೆ ರೋಧನೆ ಕೊಟ್ಟಿದ್ದು ಇದೇ ಮೊದಲು.


ಭೈರನ ಹಿಡಿಯಲು ಬಂದ ಆನೆಗಳೇ ವಾಪಸ್ ಹೋಗಿದ್ವು : ಈ ಭೈರನ ಸೆರೆಗೆ ಅರಣ್ಯ ಇಲಾಖೆ ಪ್ರಯತ್ನಿಸಿದ್ದು ಇದೇ ಮೊದಲಲ್ಲ. ಕಳೆದ ಎರಡು ತಿಂಗಳ ಹಿಂದೆಯೂ ಇವನನ್ನ ಹಿಡಿಯೋಕೆ ಎಂದು ದಸರಾ ಆನೆಗಳ ಜೊತೆ ಮಡಿಕೇರಿಯಿಂದ ಒಟ್ಟು ಆರು ಕಾಡಾನೆಗಳು ಬಂದಿದ್ದವು. ಎರಡ್ಮೂರು ದಿನ ಕಾರ್ಯಾಚರಣೆ ಕೂಡ ನಡೆಸಿದ್ದವು. ಆದರೆ, ಆ ಹೊತ್ತಿಗಾಗಲೇ ಈ ಭೈರ ಕಾಡಿನಲ್ಲಿ ಕಣ್ಮರೆಯಾಗಿದ್ದ. ಇದೇ ವೇಳೆ, ಆನೆಗಳಿಗೆ ಜ್ವರ ಹಾಗೂ ಹೊಟ್ಟೆ ಕೆಟ್ಟಿತ್ತು ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ಕಳಿಸಿದ್ದರು. ಸಾಕಾನೆಗಳು ಹೋಗುತ್ತಿದ್ದಂತೆ ಮತ್ತೆ ಬಂದ ಈ ಪುಂಡ ಸಿಕ್ಕಾಪಟ್ಟೆ ಕಾಟ ಕೋಡೋಕೆ ಶುರುಮಾಡಿದ್ದ. ಎರಡನೇ ಬಾರಿ ಮತ್ತೆ ಬಂದ ಆರು ಸಾಕಾನೆಗಳು ಎಂಟತ್ತು ದಿನಗಳ ಕಾಲ ನಿರಂತರ ಕಾರ್ಯಾಚರಣೆಯ ಬಳಿಕ ಈ ಭೈರನನ್ನ ಸೆರೆ ಹಿಡಿದಿವೆ.

ಇತ್ತೀಚಿನ ಸುದ್ದಿ

ಜಾಹೀರಾತು