ಇತ್ತೀಚಿನ ಸುದ್ದಿ
ನಂಜನಗೂಡು: ವಿವಿಧ ಬೇಡಿಕೆ ಈಡೇರಿಕೆಗೆ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು; ಕೇಂದ್ರ- ರಾಜ್ಯ ಸರಕಾರ ವಿರುದ್ಧ ಘೋಷಣೆ
16/02/2024, 22:30
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೃಹತ್
ಪ್ರತಿಭಟನೆ ನಡೆಸಿದರು.
ನಂಜನಗೂಡು ನಗರದ ಹುಲ್ಲಹಳ್ಳಿ ವೃತ್ತದಿಂದ ಕರ್ನಾಟಕ ರಾಜ್ಯ ಸಿಐಟಿಯು ಅಂಗನವಾಡಿ ನೌಕರರ ಸಂಘ ಮತ್ತು ಜೆನಿತ್ ಟೆಕ್ಸ್ ಟೈಲ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೂರಾರು ಸಂಖ್ಯೆಯ ಅಂಗನವಾಡಿ ಕಾರ್ಯಕರ್ತೆಯರು ಕಾಲ್ನಡಿಗೆ ಜಾಥಾದ ಮೂಲಕ ನಂಜನಗೂಡು ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ, ಧನಂಜಯ ಮಾತನಾಡಿ, ದೇಶಾದ್ಯಂತ ರೈತರು ಮತ್ತು ಕಾರ್ಮಿಕ ಸಂಘಟನೆಗಳು ಇಂದು ಪ್ರತಿಭಟನೆಗೆ ಕರೆ ನೀಡಿವೆ. ಕಾರ್ಮಿಕರ ತಿದ್ದುಪಡಿಯನ್ನು ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ. ಸಮಾನ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನವನ್ನು ವೆಚ್ಚಳ ಮಾಡಬೇಕು. ಈ ಬಗ್ಗೆ ರಾಜ್ಯದಲ್ಲಿ 2 ಕೋಟಿ ಸಹಿ ಸಂಗ್ರಹ ಮಾಡಲಾಗಿದೆ. ಸ್ವಾಮಿನಾಥನ್ ಆಯೋಗವನ್ನು ಜಾರಿ ಮಾಡಬೇಕು ಹಾಗೂ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತ ಮತ್ತು ಕಾರ್ಮಿಕರ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಕೇಂದ್ರ ಸರ್ಕಾರ ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಅನುದಾನವನ್ನು ಕಡಿತ ಮಾಡಿದೆ. ಹಸಿವು ಸೂಚ್ಯಂಕದಲ್ಲಿ ಭಾರತ 111ನೇ ಸ್ಥಾನಕ್ಕೆ ಬಂದಿದೆ.
ಉಚಿತ ಶಿಕ್ಷಣ ಕಡ್ಡಾಯವಾಗಿ ನೀಡಬೇಕು. ದೇಶದಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ಈಗ ಅಂಗನವಾಡಿ ಕಾರ್ಯಕರ್ತೆಯರಿಗೆ ಕಡಿಮೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಬಜೆಟ್ ನಮಗೆ ನಿರಾಶೆ ಮೂಡಿಸಿದೆ. ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಗೆ 5 ಲಕ್ಷ , ಸಹಾಯಕಿಯರಿಗೆ ಕನಿಷ್ಠ 2 ಲಕ್ಷ ಪಿಂಚಣಿ ಸೌಲಭ್ಯ ನೀಡಬೇಕು. ಕಾರ್ಮಿಕರ ಕಾಯ್ದೆಯನ್ನು ತಿದ್ದುಪಡಿ ಮಾಡಬಾರದು ಹಿಂದೆ ಇದ್ದ ಕಾಯ್ದೆಯನ್ನೇ ಮುಂದುವರಿಸಬೇಕು ಇಲ್ಲವಾದಲ್ಲಿ ದೇಶಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಂಗನವಾಡಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕಮಲಾಕ್ಷಿ ಮಾತನಾಡಿ, ನಮ್ಮ ಸಂಘಟನೆಯ 16 ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಕಮಲಾಕ್ಷಿ, ಬಿಳಿಗೆರೆ ಯೋಜನೆಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಲೀಲಾವತಿ, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಿಕಾ, ಹೇಮಾವತಿ, ಉಪಾಧ್ಯಕ್ಷೆ ಪುಷ್ಪಲತಾ, ಖಜಾಂಚಿ ಮಹದೇವಮ್ಮ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.