ಇತ್ತೀಚಿನ ಸುದ್ದಿ
ನಂಜನಗೂಡು: ಸಡಗರ- ಸಂಭ್ರಮದಿಂದ ನೆರವೇರಿದ ಪುರಾಣಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಬ್ರಹ್ಮೋತ್ಸವ
28/03/2024, 20:34
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲೂಕು ಕಳಲೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರ ರಥೋತ್ಸವ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯಿತು.
ಗುರುವಾರ ಬೆಳಿಗ್ಗೆ 7.50 ರಿಂದ 8 20 ಗಂಟೆ ಒಳಗೆ ಸಲ್ಲುವ ಶುಭ ಮೇಶ ಲಗ್ನದಲ್ಲಿ ಶ್ರೀ ಯವರ ದಿವ್ಯ ರಥಾರೋಹಣವು ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ಗ್ರಾಮದ ರಥ ಬೀದಿಯಲ್ಲಿ ವಿರಾಜಮಾನವಾಗಿ ಜರುಗಿತು.
ಇದಕ್ಕೂ ಮುನ್ನ ವಿಶೇಷವಾಗಿ ಅಲಂಕೃತಗೊಂಡ ಶ್ರೀ ಆಂಡಾಳಮ್ಮ ಹಾಗೂ ಶ್ರೀ ಅರವಿಂದ ನಾಯಕಿ ಅಮ್ಮನವರ ಸಮೇತ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರ ಉತ್ಸವ ಮೂರ್ತಿಗಳನ್ನು ದೇವಾಲಯದ ಪ್ರಾಂಗಣದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಸುತ್ತ ಪ್ರದಕ್ಷಿಣೆ ತಂದ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂ, ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕರಿಸಲಾದ ದೊಡ್ಡ ರಥದ ಸುತ್ತಲೂ ಮೆರವಣಿಗೆ ತಂದು ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥಕ್ಕೆ ಹಾಗೂ ರಥದಲ್ಲಿ ಪ್ರತಿಷ್ಠಾಪಿಸಿದ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಬಳಿಕ ಶಾಸಕ ದರ್ಶನ್ ದ್ರುವ ನಾರಾಯಣ್ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಮತ್ತಿತರ ಗಣ್ಯರು ರಥದ ಚಕ್ರಗಳಿಗೆ ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಮಂಗಳವಾದ್ಯ ಹಾಗೂ ವಿಪ್ರರ ವೇದ ಘೋಷ ಸೇರಿದಂತೆ ಸಾವಿರಾರು ಭದ್ರ ಹರ್ಷೋದ್ಗಾರದೊಂದಿಗೆ ರಥವು ಯಾವುದೇ ಅಡೆತಡೆ ಇಲ್ಲದೆ ರಥ ಬೀದಿಯಲ್ಲಿ ವಿರಾಜಮಾನವಾಗಿ ಸಾಗುವ ಮೂಲಕ ಸ್ವಸ್ಥಾನ ಸೇರಿತು. ವಿವಿಧಡೆಯಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಹಣ್ಣು ಜವನ ಎಸೆದು ರಥವನ್ನು ಎಳೆದು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು.
ದೇವಾಲಯದ ಪಾರುಪತೆಗಾರ ಜಯರಾಮ್ ಮಾತನಾಡಿ ಜಾತ್ರಾ ಮಹೋತ್ಸವದ ಬಗ್ಗೆ ವಿವರಿಸಿ ಭಕ್ತರು ದಾನಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಈ ದೇವಾಲಯದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ. ಆದರೆ ಇಂತಹ ಪುರಾತನ ದೇವಾಲಯಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.