ಇತ್ತೀಚಿನ ಸುದ್ದಿ
ನಂಜನಗೂಡು: ಪ್ರಬುದ್ಧ ಭಾರತದಲ್ಲಿ ಸಂವಿಧಾನೋತ್ಸವ ಕಾರ್ಯಕ್ರಮ
30/11/2023, 16:56

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಸಂವಿಧಾನ ದಿನಾಚರಣೆ ಅಂಗವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತದಲ್ಲಿ ಸಂವಿಧಾನೋತ್ಸವ ಎಂಬ ಕಾರ್ಯಕ್ರಮವನ್ನು ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ಛಲವಾದಿ ಮಹಾಸಭಾ, ಅಂಬೇಡ್ಕರ್ ಸಂಘ ಹಾಗೂ ಚನ್ನಪಟ್ಟಣ ಗ್ರಾಮಸ್ಥರ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಬಳಿಕ ಅವರು ಮಾತನಾಡಿ, ಅಂಬೇಡ್ಕರ್ ಅವರ ಹೆಸರಿನಲ್ಲಿ ರಾಜಕಾರಣ ಮಾಡುವ ಹಾಗೂ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುವ ರಾಜಕಾರಣಿಗಳನ್ನು ದೂರವಿಡಿ ಎಂದರು. ತಾವೆಲ್ಲರೂ ಪ್ರಬುದ್ಧ ಭಾರತದ ಕನಸನ್ನು ನನಸು ಮಾಡಬೇಕಾದರೆ ಅಂಬೇಡ್ಕರ್ ಅವರ ಆಶಯದಂತೆ ತಮ್ಮ ಪ್ರತಿಯೊಬ್ಬ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಅಂಬೇಡ್ಕರ್ ರವರ ಜೀವನ ಚರಿತ್ರೆ ಹಾಗೂ ಸಂವಿಧಾನದ ಆಶಯಗಳ ಬಗ್ಗೆ ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಹಿರಿಯ ಪತ್ರಕರ್ತರು ಹಾಗೂ ಚಿಂತಕ ಕೆ.ದೀಪಕ್ ಮಾತನಾಡಿ, ದೇಶಕ್ಕೆ ಸಂವಿಧಾನ ಹಾಗೂ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರು ದಲಿತರು, ಶೋಷಿತರು, ಮಹಿಳೆಯರ ರಕ್ಷಣೆಗಾಗಿ ಗಟ್ಟಿಯಾದ ಕಾನೂನುಗಳಿದ್ದರೂ ಪ್ರತಿನಿತ್ಯ ನೂರಾರು ದಲಿತರ ಶೋಷಿತರ ಮಹಿಳೆಯರ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಏನಾದರು ಅಂಬೇಡ್ಕರ್ ರವರು ಸಂವಿಧಾನ ಬರೆದು ಸ್ವಾತಂತ್ರ್ಯ ಸಿಗದೇ ಇದ್ದರೆ ನಮ್ಮ ರಕ್ಷಣೆಗೆ ಯಾವುದೇ ಕಾನೂನು ಇಲ್ಲ ಎಂದಿದ್ದರೆ ನಮ್ಮ ನಿಮ್ಮೆಲ್ಲರ ಬದುಕು ಹೇಗಿರುತ್ತಿತ್ತು ಎಂದು ಊಹೆ ಮಾಡಿಕೊಳ್ಳಿ. ಅದಕ್ಕಾಗಿ ಅಂಬೇಡ್ಕರ್ ಅವರ ಹೆಚ್ಚು ಹೆಚ್ಚು ಅನುಕರಣೆ ಹಾಗೂ ಅವರ ಪುಸ್ತಕಗಳನ್ನು ಓದುವ ಮೂಲಕ ಅವರಿಗೆ ಗೌರವ ನೀಡುವಂತೆ ತಿಳಿಸಿದರು.
ಇದಕ್ಕೂ ಮುನ್ನ ಗ್ರಾಮದ ಬೀದಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಮೆರವಣಿಗೆ ಮಾಡಲಾಯಿತು
ಇದೇ ಸಂದರ್ಭ ಕಾರ್ಯಕ್ರಮಕ್ಕೆ ಬಂದ ಅತಿಥಿ ಗಣ್ಯರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಬಿಎಸ್ಪಿ ತಾಲೂಕು ಘಟಕದ ಅಧ್ಯಕ್ಷ ಶ್ರೀಕಂಠ, ನಂಜನಗೂಡು ನಗರಸಭಾ ಸದಸ್ಯ ಯೋಗೀಶ್, ಗ್ರಾಮ ಪಂಚಾಯಿತಿ ಸದಸ್ಯೆ ನಾಗಮ್ಮ, ಚಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅಭಿ ನಾಗಭೂಷಣ್, ತಾಲೂಕು ಘಟಕದ ಅಧ್ಯಕ್ಷ ಭಾಸ್ಕರ್, ಮುಖಂಡರಾದ ಬಸವರಾಜ್, ಕೂಸಪ್ಪ ಸೇರಿದಂತೆ ಗ್ರಾಮದ ಯಜಮಾನರುಗಳು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.