ಇತ್ತೀಚಿನ ಸುದ್ದಿ
ನಂಜನಗೂಡು ನಗರಸಭೆ: ನೂತನ ಪೌರಾಯುಕ್ತರಾಗಿ ವಿಜಯ್ ಅಧಿಕಾರ ಸ್ವೀಕಾರ
10/12/2024, 18:46
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ನಗರ ಸಭೆಯ ನೂತನ ಪೌರಾಯುಕ್ತರಾಗಿ ವಿಜಯ್ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಹಿಂದಿನ ಪೌರಾಯುಕ್ತ ನಂಜುಂಡಸ್ವಾಮಿ ಅವರು ವರ್ಗಾವಣೆಗೊಂಡ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಮಡಿಕೇರಿಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್ ಅವರು ನಂಜನಗೂಡಿಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.
2019ರಲ್ಲಿ ಪುರಸಭೆಯಿಂದ ನಗರಸಭೆಗೆ ಬಡ್ತಿ ಪಡೆದ ಸಂದರ್ಭ ಮೊದಲ ಪೌರಾಯುಕ್ತರಾಗಿ ಈ ಹಿಂದೆ ನಂಜನಗೂಡು ನಗರ ಸಭೆಯಲ್ಲಿ ಅವರು ಕಾರ್ಯನಿರ್ವಹಿಸಿದ್ದು,
ಈಗ ಎರಡನೇ ಬಾರಿಗೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ನಗರಸಭೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಅವರು ನಂಜನಗೂಡಿನ ಕೆಲವು ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸಿ ನಗರಸಭೆಯ ಅಭಿವೃದ್ಧಿಗೆ ಮುಂದಾಗುತ್ತಾರೆಂಬ ಭರವಸೆ ನಂಜನಗೂಡಿನ ನಾಗರೀಕರಲ್ಲಿದೆ.
ನಗರಸಭೆಯ ನೂತನ ಆಯುಕ್ತರಾದ ವಿಜಯ್ ಅವರು ಮಾತನಾಡಿ, ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಪವಿತ್ರ ಪುಣ್ಯಕ್ಷೇತ್ರ ಈ ನಂಜುಂಡೇಶ್ವರನ ಸನ್ನಿಧಿಯಲ್ಲಿ ಎರಡನೇ ಬಾರಿಗೆ ಕೆಲಸ ಮಾಡುವ ಪುಣ್ಯ ಸಿಕ್ಕಿದೆ. ಹಾಗಾಗಿ ಕ್ಷೇತ್ರದ ಶಾಸಕರು, ಸಂಸದರು, ಸಚಿವರು ಸೇರಿದಂತೆ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರುಗಳು ಮತ್ತು ಸಹೋದ್ಯೋಗಿ ಅಧಿಕಾರಿಗಳ ಸಹಕಾರದಿಂದ ಉತ್ತಮ ಕೆಲಸ ಮಾಡಿ ನಗರಸಭೆ ಅಭಿವೃದ್ಧಿ ಗೆ ಶ್ರಮಿಸುವುದಾಗಿ ತಿಳಿಸಿದರು.