ಇತ್ತೀಚಿನ ಸುದ್ದಿ
ನಂಜನಗೂಡು: ಕಾಡುಪ್ರಾಣಿಗಳ ಬೇಟೆಗೆ ಇಟ್ಟಿದ ಸಿಡಿಮದ್ದು ತಂದ ಆಪತ್ತು; ಜಾನುವಾರು ಬಾಯಿ ಛಿದ್ರಛಿದ್ರಗೊಂಡು ಸ್ಥಳದಲ್ಲಿಯೇ ಸಾವು
16/01/2024, 18:40

*ಸ್ಥಳ ಪರಿಶೀಲನೆ ಮಾಡಿ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ ಎ. ಎಸ್.ಪಿ. ಬಾಬು ಪಿಎಸ್ಐ ರಮೇಶ್ ಕರ್ಕಿ ಕಟ್ಟೆ ನೇತೃತ್ವದ ತಂಡ*
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕಾಡು ಪ್ರಾಣಿಗಳ ಬೇಟೆಗಾಗಿ ಪೇಪರ್ ನಲ್ಲಿ ಸುತ್ತಿ ಇಡಲಾಗಿದ್ದ ಸಿಡಿಮದ್ದನ್ನ ತಿಂದ ಹಸು ಬಾಯಿ ಛಿದ್ರಗೊಂಡು ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪ ಇರುವ ಈರೇಗೌಡನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಮಹಾದೇವಯ್ಯ ಎಂಬುವರ ಕೃಷಿ ಜಮೀನಿನಲ್ಲಿ ಘಟನೆ ನಡೆದಿದ್ದು ಕಾಡು ಹಂದಿ ಸೇರಿದಂತೆ ವಿವಿಧ ಪ್ರಾಣಿಗಳ ಬೇಟೆಗಾಗಿ ಕೃಷಿ ಜಮೀನಿನಲ್ಲಿ ಕಿಡಿಗೇಡಿಗಳು ಸಿಡಿಮದ್ದನ್ನು ಬಚ್ಚಿಟ್ಟಿದ್ದಾರೆ. ತಿನ್ನುವ ಪದಾರ್ಥ ಇರಬಹುದೆಂದು ಹಸು ಬಾಯಿ ಹಾಕಿದಾಗ ಸಿಡಿಮದ್ದು ಸ್ಪೋಟಗೊಂಡು ಬಾಯಿ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಮೈಸೂರಿನ ಉಪ ಪೋಲೀಸ್ ವರಿಷ್ಠಾಧಿಕಾರಿ ಬಾಬು ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರ್ಕಿಕಟ್ಟೆ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಶ್ವಾನದಳ ಮೂಲಕ ಸ್ಥಳ ಪರಿಶೀಲನೆ ಮಾಡಿ ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಈ ಕುರಿತು ಮೈಸೂರು ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಬು ಮಾತನಾಡಿ, ನಾವು ಈಗಾಗಲೇ ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದ್ದೇವೆ. ಜಾನುವಾರು ಕಳೆದುಕೊಂಡ ಮಾಲೀಕರು ಮತ್ತು ಇತರರ ಜೊತೆ ನಾವು ಮಾತನಾಡಿದ್ದೇವೆ. ಕಿಡಿಗೇಡಿಗಳ ಬಂಧನಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಅವಘಡ ಸಂಭವಿಸಿರುವುದು ಇದೇ ಮೊದಲು. ಕಿಡಿಗೇಡಿಗಳು ಕಾಡುಪ್ರಾಣಿಗಳ ಭೇಟಿಗಾಗಿ ಇಂತಹ ಕೃತ್ಯವ್ಯಸಗಿದ್ದಾರೆ. ಆದರೆ ಇಲ್ಲಿ ಸಾಕು ಪ್ರಾಣಿ ಜಾನುವಾರು ಬಲಿಯಾಗಿದೆ ಕೂಡಲೇ ತಪ್ಪಿತಸ್ಥರನ್ನು ಬಂಧಿಸಲು ನಾವು ಮುಂದಾಗುತ್ತೇವೆ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್ ಐ ರಮೇಶ್ ಕರ್ಕಿ ಕಟ್ಟೆ ಹೇಳಿದ್ದಾರೆ.