ಇತ್ತೀಚಿನ ಸುದ್ದಿ
ನಂಜನಗೂಡು: ಅಸ್ಪೃಶ್ಯತೆ ಅಳಿಯಲಿ ಮನುಷ್ಯತ್ವ ಉಳಿಯಲಿ: ಮಾರ್ಚ್ 10 ರಂದು ಮೈಸೂರಿನಲ್ಲಿ ವಿಚಾರ ಸಂಕಿರಣ
09/03/2024, 14:39

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಜಾತಿ ವಿನಾಶ ಮತ್ತು ಸರ್ವ ಧರ್ಮ ಸಮನ್ವಯತೆ ಸಾರಿದ ಮಹಾನ್ ಮಾನವತಾವಾದಿಗಳಾದ ವಿಶ್ವಗುರು ಕ್ರಾಂತಿಕಾರಿ ಬಸವಣ್ಣ, ಸಂವಿಧಾನ ಶಿಲ್ಪಿ ಮಾನವತಾವಾದಿ ಡಾ ಬಿ ಆರ್ ಅಂಬೇಡ್ಕರ್, ವಿಶ್ವಮಾನವ ಕುವೆಂಪು ಅವರ ಆಶಯಗಳನ್ನೊಳಗೊಂಡ ಅಸ್ಪೃಶ್ಯತೆ ಅಳಿಯಲಿ ಮನುಷ್ಯತ್ವ ಉಳಿಯಲಿ ಕುರಿತು ವಿಚಾರ ಸಂಕಿರಣವನ್ನು ಮಾರ್ಚ್ 10ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ನಗರದ ಟೌನ್ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ತಾಲೂಕು ಸಂಘಟನಾ ಸಂಯೋಜಕರಾದ ಕೃಷ್ಣಮೂರ್ತಿ ಕಂದೇಗಾಲ ಹಾಗೂ ಪುಟ್ಟಬುದ್ದಿ ಮಲ್ಕುಂಡಿ ತಿಳಿಸಿದರು.
ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಎಚ್ ಸಿ ಮಹದೇವಪ್ಪನವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳು ಹಾಗೂ ಆಶಯ ಭಾಷಣಕಾರರಾಗಿ ಅಂಬೇಡ್ಕರ್ ವಾದಿಗಳು ಹಾಗೂ ಅಹಿಂದ ನಾಯಕರು ಆದ ಸಚಿವ ಸತೀಶ್ ಜಾರಕಿಹೊಳಿ ಅವರು ಹಾಗೂ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್. ಸಿ. ಬಸವರಾಜ್ , ಬಸವಣ್ಣ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯ ದಸಂಸ ಮುಖಂಡರಾದ ದೇವಗಳ್ಳಿ ಸೋಮಶೇಖರ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಸ್ಥಾಪಕ ಸಂಯೋಜಕರಾದ ವಿ ನಾಗರಾಜರವರು ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿ ಅಂದಿನ ಕಾರ್ಯಕ್ರಮಕ್ಕೆ ನಂಜನಗೂಡು ತಾಲೂಕಿನಿಂದ ನೂರಾರು ಕಾರ್ಯಕರ್ತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ದಸಂಸ ತಾಲೂಕು ಸಂಯೋಜಕರಾದ ಕುಮಾರ್ ಕಳಲೆ, ಸೋಮಣ್ಣ ಬಿಳಿಗೆರೆ, ದಿವಾಕರ್ ಕಂದೇಗಾಲ ಉಪಸ್ಥಿತರಿದ್ದರು.