ಇತ್ತೀಚಿನ ಸುದ್ದಿ
ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ
26/08/2025, 22:59

*ಇದು ಕೇವಲ ಒಂದು ರಾಜಕೀಯ ವರ್ಗದ ಅನ್ನ ಮತ್ತು ಅಧಿಕಾರದ ಪ್ರಶ್ನೆ*
ಬೆಂಗಳೂರು(reporterkarnataka.com): ಕನ್ನಡದ ಜಾತ್ಯತೀತತೆಯ ಸಂಕೇತವಾಗಿರುವ ನಾಡಹಬ್ಬ ದಸರಾವನ್ನು ಸಂಪೂರ್ಣ ಧಾರ್ಮಿಕ ಹಬ್ಬವೆಂದು ಬಿಂಬಿಸಿ ರಾಜ್ಯದ ಶಾಂತಿಯನ್ನು ಕದಡಲೆತ್ನಿಸುತ್ತಿರುವ ಹಿತಾಸಕ್ತಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಘನತೆಯ ಕುಸಿತಕ್ಕೆ ಕಾರಣರಾಗಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬಾನು ಮುಷ್ತಾಕ್ ಅವರನ್ನು ನಾಡ ಹಬ್ಬದ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವ ಸರ್ಕಾರದ ತೀರ್ಮಾನವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಇದ್ದು, ನಾಡಿನ ಜಾತ್ಯಾತೀತತೆಗೆ ಸಲ್ಲಿಸಿರುವ ಗೌರವವಾಗಿದೆ ಎಂದಿರುವ ಬಿಳಿಮಲೆ, ಹಿಂದೆ ಇಲ್ಲದ ವಿರೋಧ ಈಗ ಕಂಡು ಬರುತ್ತಿರುವುದರ ಹಿನ್ನೆಲೆಯಲ್ಲಿ ಇದರಲ್ಲಿ ಮಹಿಳಾ ವಿರೋಧಿ ನಿಲುವಷ್ಟೇ ಅಲ್ಲ, ಒಂದು ರಾಜಕೀಯ ವರ್ಗದ ಅನ್ನ ಮತ್ತು ಅಧಿಕಾರದ ಪ್ರಶ್ನೆ ಅಡಗಿದೆ ಎಂದಿದ್ದಾರೆ.
*ದಸರಾ ಧಾರ್ಮಿಕವಲ್ಲ:* ನಾಡಹಬ್ಬ ದಸರಾ ಎಂದಿಗೂ ಕೇವಲ ಧಾರ್ಮಿಕ ಹಬ್ಬವಾಗಿ ಜನರ ಮನಸ್ಸನ್ನು ಆಕರ್ಷಿಸಿಲ್ಲ. ಯಾವುದೇ ಊರಿನ ಜಾತ್ರೆಗಳು ಪೂರ್ತಿಯಾಗಿ ಧಾರ್ಮಿಕವಾಗಲು ಸಾಧ್ಯವೇ ಇಲ್ಲವೆಂದಿರುವ ಬಿಳಿಮಲೆ, ಇಂತಹ ಸಾರ್ವಜನಿಕ ಹಬ್ಬಗಳಲ್ಲಿ ದೇವರು ಪವಿತ್ರ ಜಾಗದಿಂದ ಹೊರ ಬಂದು ಜಾತ್ಯಾತೀತರಾಗುತ್ತಾರೆ (From sacred to secular) ಮತ್ತು ಈ ಜಾತ್ಯಾತೀತತೆಯಲ್ಲಿಯೇ ನಮ್ಮ ನಾಡಿನ ಅಸ್ಮಿತೆ ಅಡಗಿದೆ ಎಂದಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನ ಅರಸರಾಗಿದ್ದ ಸಂದರ್ಭದಲ್ಲಿ ಆನೆಯು ಹೊತ್ತು ತರುತ್ತಿದ್ದ ಪಲ್ಲಕಿಯ ಮೇಲೆ ತಾವೇ ಆಸೀನರಾಗಿರುತ್ತಿದ್ದರು ಎಂಬ ವಿಷಯವನ್ನು ಸ್ಮರಿಸಿರುವ ಬಿಳಿಮಲೆ, ಈಗ ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಕನ್ನಡದ ಪ್ರಾತಿನಿಧಿಕ ಸಂಕೇತವನ್ನಾಗಿ ಪಲ್ಲಕಿಯಲ್ಲಿ ಕೂರಿಸುವುದು ಹೇಗೆ ಧಾರ್ಮಿಕತೆಯ ಕುರುಹಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ವಿಜಯನಗರದ ಪತನದ ನಂತರ ಮೈಸೂರಿನಲ್ಲಿ ದಸರಾ ಆಚರಣೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಹಂಪಿಯಲ್ಲಿ ನಡೆಯುತ್ತಿದ್ದ ದಸರಾ ದಿಬ್ಬಣದಲ್ಲಿ ಮುಸ್ಲಿಂ ಅರಬ್ಬರು, ತುರ್ಕರು ಅಥವಾ ಪರ್ಷಿಯನರು ಪಾಲ್ಗೊಳುತ್ತಿದ್ದ ಕುರಿತಂತೆ ಅನೇಕ ಸಂಶೋಧನೆಗಳು ದಾಖಲಿಸಿವೆ ಎಂದಿರುವ ಬಿಳಿಮಲೆ, ಇಂದಿನ ಅನಗತ್ಯ ವಿರೋಧವು ನಮ್ಮ ಸಮಾಜವನ್ನು ನೂರಾರು ವರ್ಷಗಳ ಹಿಂದಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಕಂಡಿದೆ ಎಂದಿದ್ದಾರೆ.
ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದರು. ಅವರ ಆಶಯಕ್ಕೆ ಭಂಗ ತರದ ರೀತಿಯಲ್ಲಿ ನಾವು ಬಾಳಬೇಕಿದೆ ಎಂದು ಬಿಳಿಮಲೆ ಹೇಳಿದ್ದಾರೆ.
*ಕನ್ನಡ ಸಾಮರಸ್ಯದ ನೆಲೆಗಳು:* ಕರ್ನಾಟಕ ಸಂಸ್ಕೃತಿಯ ಬಹುಮುಖಿ ಪರಂಪರೆ ಅವುಗಳು ಒಟ್ಟಿಗೆ ಬಾಳಿದ ರೀತಿಯನ್ನು ನಾಡಿನ ಯುವ ಪೀಳಿಗೆ ಅರಿಯುವುದು ಬಹಳ ಮುಖ್ಯವೆಂದಿರುವ ಬಿಳಿಮಲೆ, ಇಂತಹ ವಿರೋಧಗಳು ನಮ್ಮ ಮುಂದಿನ ಜನಾಂಗವನ್ನು ದಾರಿ ತಪ್ಪಿಸುವ ಸಾಮರ್ಥ್ಯವನ್ನು ಹೊಂದಿವೆ. ಇದಕ್ಕೆ ಅವಕಾಶ ನೀಡದಂತೆ ನಾಡಿನ ಜನ ಒಗ್ಗಟ್ಟನ್ನು ತೋರಬೇಕೆಂದಿದ್ದಾರೆ. ಕರ್ನಾಟಕದ ಬಹುಭಾಷಾ ಪರಿಸರ, ವಿವಿಧ ಮತಧರ್ಮಗಳ ಅಸ್ತಿತ್ವದ ನಡುವೆಯೂ ನಾಡು ನಿರ್ಮಾಣವಾದ ರೀತಿಯನ್ನು ಯುವ ಜನತೆಗೆ ಪರಿಚಯ ಮಾಡಿಸುವ ಸದುದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಾಮರಸ್ಯದ ನೆಲೆಗಳು ಶೀರ್ಷಿಕೆಯಡಿಯಲ್ಲಿ ಅತಿ ಶೀಘ್ರದಲ್ಲೇ 40 ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದೆ ಎಂದಿರುವ ಬಿಳಿಮಲೆ, ಈ ಕೃತಿಗಳು ಸೌಹಾರ್ದ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಕರ್ನಾಟಕವು ಇಂದಿಗೂ ತನ್ನ ಸಾಮರಸ್ಯದ ಅಸ್ಮಿತೆಯನ್ನು ಹೇಗೆ ಉಳಿಸಿಕೊಂಡಿದೆ ಎನ್ನುವ ಪರಿಚಯವನ್ನು ಮಾಡಿಸಲಿವೆ ಎಂದಿದ್ದಾರೆ.