ಇತ್ತೀಚಿನ ಸುದ್ದಿ
ನಾದಬ್ರಹ್ಮ ಹಂಸಲೇಖಗೆ ಹೈಕೋರ್ಟ್ ಬಿಗ್ ರಿಲೀಫ್ : ಪ್ರಕರಣ ದಾಖಲಾತಿಗೆ ತಡೆಯಾಜ್ಞೆ; ದೂರುದಾತರಿಗೆ ತೀವ್ರ ಮುಖಭಂಗ
30/11/2021, 21:48
ಬೆಂಗಳೂರು(reporterkarnataka.com): ಪೇಜಾವರ ಶ್ರೀಗಳ ಕುರಿತು ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಖ್ಯಾತಿಯ ಹಂಸಲೇಖ ಅವರು ನೀಡಿದ ಹೇಳಿಕೆಯ ವಿರುದ್ಧ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆ ಮೂಲಕ ಹಂಸಲೇಖ ವಿರುದ್ಧ ದೂರು ನೀಡಿದವರಿಗೆ ತೀವ್ರ ಮುಖಭಂಗವಾಗಿದೆ.
ಹಂಸಲೇಖ ಅವರು ತನ್ನ ವಿರುದ್ಧ ದಾಖಲಾದ ದೂರು ವಿರುದ್ಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯಲ್ಲಿ ತನ್ನ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣಗಳಿಗೆ ತಡೆಯಾಜ್ಞೆ ನೀಡಿದೆ.
ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಂಸಲೇಖ ಅವರು ಅಸ್ಪೃಶ್ಯತೆ ಕುರಿತು ಮಾತನಾಡಿದ್ದರು.ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ ಮಾಡಲು ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿತ್ತು. ನಿಜಾನಾ?! ದಲಿತರ ಮನೆಗೆ ಹೋಗಿ ಕೂತಿದ್ದರಂತೆ. ಕುಳಿತುಕೊಳ್ಳೋದಕ್ಕೆ ಆಗುತ್ತಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಕ್ ಆಗುತ್ತಾ? ಕೋಳಿ ಬೇಡ ಕುರಿ ರಕ್ತ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ತಿಂತಾರಾ? ಸಾಧ್ಯವಿಲ್ಲ’ ಎಂದು ಹೇಳಿದ್ದರು.
ಮಹಾತ್ಮ ಗಾಂಧಿ ಹೇಳಿದಂತೆ ದಲಿತರ ಮನೆಗೆ ಬಲಿತರು ಬರಬೇಕು. ಅವರ ಮನೆಗೂ ದಲಿತರನ್ನು ಕರೆದುಕೊಂಡು ಹೋಗಬೇಕು. ನಮ್ಮನೆ ಲೋಟ ನೀನು ಮುಟ್ಟು. ನೀ ಕುಡಿದದನ್ನ ನಾವು ತೊಳಿತೀವಿ ಅಂತ ಅವರು ಹೇಳಬೇಕು. ಅದು ನಿಜವಾದ ಕ್ಷಣ.’ಎಂದು ಹಂಸಲೇಖ ಸಲಹೆ ನೀಡಿದ್ದರು.
ಹಂಸಲೇಖ ಅವರ ಪರ ವಕೀಲರಾದ ಕಾಶೀನಾಥ್ ಮತ್ತು ಸಿ.ಎಸ್. ದ್ವಾರಕಾನಾಥ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.