ಇತ್ತೀಚಿನ ಸುದ್ದಿ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ
20/08/2024, 12:31

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಉಸಾದ್ ಉರ್ ರೆಹಮಾನ್ ಶರೀಫ್ ಅವರು ಕ್ಯಾಮೆರಾ ಕ್ಲಿಕ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು 1839ರ ಆಗಸ್ಟ್ 19ರಂದು ಪ್ರಾರಂಭವಾದ ಈ ದಿನಾಚರಣೆಯನ್ನು ಇಂದು ಸುಮಾರು ನೂರು ದೇಶಗಳಲ್ಲಿ ಆಚರಿಸಲಾಗುತ್ತಿದೆ. ಫೋಟೋ ಎಂಬುದು ಗ್ರೀಸ್ ಭಾಷೆಯಾಗಿದೆ ಎಂದು ಮೊಟ್ಟ ಮೊದಲ ಕ್ಯಾಮರಾ ಹಾಗೂ ಫೋಟೋಗ್ರಫಿಯ ಬಗ್ಗೆ ಸವಿವರವಾಗಿ ತಿಳಿಸುತ್ತಾ ನಾನು ಮೈಸೂರಿನವನೆ ಹಾಗಿದ್ದು ಮೈಸೂರು ನಗರದ ಸರ್ವತೋ ಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕು ಎಂದರು.
ಅಧ್ಯಕ್ಷತೆ ವಹಿಸಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮಾತನಾಡಿ, ಸಾವಿರಾರು ಪದಗಳ ಘಟನೆಗೆ ಒಂದು ಫೋಟೋ ಸಮನಾಗಿರುತ್ತದೆ. ಅಲ್ಲದೆ ಪತ್ರಕರ್ತನ ಬರವಣಿಗೆಗೆ ಫೋಟೋ ಸಾಕ್ಷಿಯಾಗಿರುತ್ತದೆ. ಯಾವುದೇ ಒಂದು ಫೋಟೋ ಇಲ್ಲದ ಮಾಧ್ಯಮ ಹಾಗೂ ಪತ್ರಿಕೆ ಪರಿಪೂರ್ಣವಾಗುವುದಿಲ್ಲ ಎಂದು ಫೋಟೋಗ್ರಫಿಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು.
ಇದೇ ಸಂದರ್ಭ ಮೈಸೂರಿನ ಹಿರಿಯ ಛಾಯಾಗ್ರಹಕರು ತೆಗೆದಿರುವ ಹಲವಾರು ಉತ್ತಮ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಅತಿಥಿ ಗಣ್ಯರು ಫೋಟೋ ವಸ್ತು ಪ್ರದರ್ಶನ ವೀಕ್ಷಣೆ ಮಾಡಿ ಛಾಯಾಗ್ರಾಹಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಪ್ರಗತಿ ಗೋಪಾಲಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಧರ್ಮಾಪುರ ನಾರಾಯಣ್, ನಗರ ಕಾರ್ಯದರ್ಶಿ ಕೃಷ್ಣೋಜಿ ರಾವ್, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ಉಪಾಧ್ಯಕ್ಷ ವೆಂಕಟಪ್ಪ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ಹಿರಿಯ ಛಾಯಾಗ್ರಹಕರು ಉಪಸ್ಥಿತರಿದ್ದರು.