ಇತ್ತೀಚಿನ ಸುದ್ದಿ
ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 412 ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣ
09/12/2025, 13:06
ಗಿರಿಧರ್ ಕೊಂಪುಳಿರ ಮಡಿಕೇರಿ
info.repprterkarnataka@gmail.com
ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 lರ ಎರಡನೇ ಹಂತದ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ದೊರೆತಿದ್ದು, ಕಾಮಗಾರಿ ಆರಂಭವಾಗಲಿದೆ.
92.3 ಕಿಲೋಮೀಟರ್ ಉದ್ದದ ಈ 4-ಲೇನ್ ಹೆದ್ದಾರಿ ಯೋಜನೆಯು ಒಟ್ಟು 4126 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಮೈಸೂರು-ಮಡಿಕೇರಿ ರಸ್ತೆಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12, 2023 ರಂದು ಮಂಡ್ಯದಲ್ಲಿ ಈ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಅರಣ್ಯ ಮತ್ತು ಪರಿಸರ ಸಂಬಂಧಿತ ಎಲ್ಲಾ ನಿಯಮಗಳನ್ನು ಪೂರೈಸಿದ ನಂತರವೇ ಈ ಅನುಮತಿ ದೊರೆತಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯು ಕೊಡಗು ಮತ್ತು ಹುಣಸೂರು (ಮೈಸೂರು) ವಿಭಾಗಗಳಲ್ಲಿ ಬರುತ್ತದೆ. ಕಾಮಗಾರಿ ನಡೆಸುವ ಕಂಪನಿಯು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಂದ ಒಪ್ಪಿಗೆ ಪತ್ರಗಳನ್ನು ಸಲ್ಲಿಸಿದ್ದು, ಇದೀಗ ಕೆಲಸದ ಆದೇಶ ಹೊರಡಿಸಲಾಗಿದೆ. ಎರಡನೇ ಹಂತದ ಕಾಮಗಾರಿ, ಅಂದರೆ ಬಸವನಹಳ್ಳಿಯಿಂದ ಪಿರಿಯಾಪಟ್ಟಣದವರೆಗಿನ 22.7 ಕಿಲೋಮೀಟರ್ ರಸ್ತೆಯ ನಿರ್ಮಾಣವು ಸುಮಾರು 18 ತಿಂಗಳಲ್ಲಿ ಅಂದರೆ 2027 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹೆದ್ದಾರಿಯನ್ನು ಐದು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ.
ಮೊದಲ ಪ್ಯಾಕೇಜ್, ಅಂದರೆ ಕುಶಾಲನಗರದಿಂದ ಮಡಿಕೇರಿಯವರೆಗಿನ 22 ಕಿಲೋಮೀಟರ್ ರಸ್ತೆಯ ಕಾಮಗಾರಿ, ದಟ್ಟ ಅರಣ್ಯ ಪ್ರದೇಶದ ಮೂಲಕ ಹಾದುಹೋಗುವುದರಿಂದ ಇನ್ನೂ ಅನುಮತಿಗಾಗಿ ಕಾಯುತ್ತಿದೆ. ಈ ಬಗ್ಗೆ ಕೊಡಗು ಸಾರ್ವಜನಿಕ ಅರಣ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಎಂ. ಗಿರೀಶ್ ಅವರು, ಬಸವನಹಳ್ಳಿಯಲ್ಲಿ ಹೆದ್ದಾರಿಯನ್ನು ಅಗಲೀಕರಣಗೊಳಿಸುವ ಪ್ರಸ್ತಾವನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರಿಂದ ಕುಶಾಲನಗರ, ಮಡಿಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕುಶಾಲನಗರ ಮತ್ತು ಮಡಿಕೇರಿಯ ನಡುವಿನ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ವಿಸ್ತರಣೆಯು ಚರ್ಚೆಯಲ್ಲಿದೆ. ಈ ಬಗ್ಗೆ ವಿವರವಾದ ಯೋಜನಾ ವರದಿ (DPR) ತಯಾರಿಸುವ ಮುನ್ನ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರೆ, ಅವರು ಸಾಧ್ಯತೆಗಳನ್ನು ಪರಿಶೀಲಿಸಿ ಅನುಮತಿ ನೀಡಬಹುದು ಎಂದು ಕೊಡಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಹೇಳಿದ್ದಾರೆ.
ಈ ಮಹತ್ವದ ರಾಷ್ಟ್ರೀಯ ಹೆದ್ದಾರಿ 275 ರ ನಿರ್ಮಾಣವು ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ. ಇದು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಪ್ರಸ್ತುತ ಮೈಸೂರು-ಮಡಿಕೇರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹೊಸ ಹೆದ್ದಾರಿ ನಿರ್ಮಾಣವಾದರೆ, ಪ್ರಯಾಣದ ಸಮಯವು ಕಡಿಮೆಯಾಗುವುದಲ್ಲದೆ, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಯೋಜನೆಯು ಒಟ್ಟು 92.3 ಕಿಲೋಮೀಟರ್ ಉದ್ದವಿದ್ದು, 4-ಲೇನ್ ಹೆದ್ದಾರಿಯಾಗಿ ನಿರ್ಮಾಣವಾಗುತ್ತಿದೆ. ಇದರ ಒಟ್ಟು ವೆಚ್ಚ 4126 ಕೋಟಿ ರೂಪಾಯಿಗಳು. ಈ ಯೋಜನೆಯನ್ನು ಐದು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ.
ಪ್ಯಾಕೇಜ್ 2ರ ಕಾಮಗಾರಿ ನಾಳೆಯಿಂದ ಅಂದರೆ ಡಿ. 8 ರಿಂದ ಆರಂಭವಾಗಲಿದೆ. ಇದು ಬಸವನಹಳ್ಳಿಯಿಂದ ಪಿರಿಯಾಪಟ್ಟಣದವರೆಗಿನ 22.7 ಕಿಲೋಮೀಟರ್ ರಸ್ತೆಯನ್ನು ಒಳಗೊಂಡಿದೆ. ಈ ಪ್ಯಾಕೇಜ್‌ಗೆ ಸುಮಾರು 18 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ. ಅಂದರೆ 2027 ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಾಮಗಾರಿಗೆ ಬೇಕಾದ ಎಲ್ಲಾ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಈಗಾಗಲೇ ಸಂಗ್ರಹಿಸಿ ಸಿದ್ಧಪಡಿಸಲಾಗಿದೆ.












