ಇತ್ತೀಚಿನ ಸುದ್ದಿ
ಮುಂಜಾನೆ 3 ಗಂಟೆಗೆ ನಡೆದ ಹುಲಿ ಕಾರ್ಯಾಚರಣೆ ಯಶಸ್ವಿ: ಸೆರೆಸಿಕ್ಕ 10 ವರ್ಷ ಪ್ರಾಯದ ನರಹಂತಕ ವ್ಯಾಘ್ರ; ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ರವಾನೆ
28/11/2023, 11:20
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಒಂದೇ ತಿಂಗಳಲ್ಲಿ ಇಬ್ಬರನ್ನ ಬಲಿ ಪಡೆದು ಭೀತಿ ಹುಟ್ಟಿಸಿದ್ದ ನರಹಂತಕ ಹುಲಿ ಕೊನೆಗೂ ಸೆರೆಸಿಕ್ಕಿದೆ. ಇಬ್ಬರು ದನಗಾಹಿಗಳನ್ನ ಕೊಂದು ಹಲವಾರು ಜಾನುವಾರಗಳನ್ನು ಹೊತ್ತೊಯ್ದು ಆತಂಕ ಸೃಷ್ಟಿಸಿದ್ದ ಹುಲಿಯನ್ನ ಸೆರೆ ಹಿಡಿಯಲು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಇಂದು ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ನಂಜನಗೂಡು ತಾಲೂಕು ಬಳ್ಳೂರುಹುಂಡಿ ಗ್ರಾಮದ ಬಳಿ ಕಲ್ಲಹಾರ ಕಂಡಿ ಎಂಬ ಸ್ಥಳದಲ್ಲಿ ಸೆರೆ ಹಿಡಿದಿದ್ದಾರೆ. ಸುಮಾರು ಹತ್ತು ವರ್ಷ ವಯಸ್ಸಿನ ಗಂಡು ಹುಲಿ ಇದಾಗಿದೆ. ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ ಎಂಬ ದನಗಾಯಿ ಮಹಿಳೆಯನ್ನು ಬಲಿ ಪಡೆದಿತ್ತು. ಮಹದೇವನಗರದಲ್ಲಿ ಓರ್ವ ದನಗಾಹಿಯ ಮೇಲು ದಾಳಿ ನಡೆಸಿತ್ತಲ್ಲದೆ. ಹಲವಾರು ಜಾನುವಾರುಗಳನ್ನು ಸಹ ಬಲಿ ಪಡೆದಿತ್ತು. ಇದರಿಂದ ಆತಂಕಗೊಂಡ ಹೆಡಿಯಾಲ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗೂ ಸಹ ಮುಂದಾಗಿದ್ದರು.
ಇದರಿಂದ ಎಚ್ಚೆತ್ತ ಸರ್ಕಾರ ಮತ್ತು ಅರಣ್ಯ ಇಲಾಖೆ ಕಳೆದ ಮೂರು ದಿನಗಳಿಂದ ಹುಲಿ ಹಿಡಿಯಲು ಕಾರ್ಯಾಚರಣೆ ಹಮ್ಮಿಕೊಂಡಿತ್ತು.ಇಂದು ಕಾರ್ಯಾಚರಣೆ ಯಶಸ್ವಿಯಾಗಿ ಹುಲಿ ಸೆರೆ ಸಿಕ್ಕ ಹಿನ್ನೆಲೆ ಆ ಭಾಗದ ಸುತ್ತಮುತ್ತಲ ಗ್ರಾಮಸ್ಥರು ನೆಟ್ಟುಸಿರು ಬಿಡುವಂತಾಗಿದೆ. ವೈದ್ಯಾಧಿಕಾರಿ ವಾಸಿಮ್ ನರಭಕ್ಷಕ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ರಮೇಶ್ ಕುಮಾರ್ ಹಾಗೂ ಹೆಡಿಯಾಲ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚುಮಂದಿ ಕಾರ್ಯಾಚರಣೆ ನಡೆಸಿದ್ದರು.
ಆನೆಗಳು ಸೇರಿದಂತೆ ಡ್ರೋನ್ ಕ್ಯಾಮೆರಾ ಮತ್ತು ಹಲವು ಸಿಸಿ ಕ್ಯಾಮರಾಗಳನ್ನ ಕಾರ್ಯಾಚರಣೆಯಲ್ಲಿ ಬಳಕೆ ಮಾಡಲಾಗಿತ್ತು. ಸಿಸಿ ಕ್ಯಾಮರಾದಲ್ಲಿ ಎರಡು ಹುಲಿಗಳು ಪತ್ತೆಯಾಗಿತ್ತು.ಸಧ್ಯ ಒಂದು ಹುಲಿ ಮಾತ್ರ ಸೆರೆಯಾಗಿದೆ.
ಸೆರೆ ಸಿಕ್ಕ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ಬಳಿ ಇರುವ ಹುಲಿಗಳ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.