ಇತ್ತೀಚಿನ ಸುದ್ದಿ
ಮುದ್ರಾಂಕ ಶುಲ್ಕ ಏರಿಕೆಯಿಂದ ಬಡ, ಮಧ್ಯಮ ವರ್ಗದವರಿಗೆ ಹೊರೆ: ಶಾಸಕ ವೇದವ್ಯಾಸ ಕಾಮತ್
30/08/2023, 22:24
ಮಂಗಳೂರು(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಬರೆ ಹಾಕುತ್ತಿದ್ದು, ಇದೀಗ ಮುದ್ರಾಂಕ ಶುಲ್ಕವನ್ನು ಏರಿಸಲು ನಿರ್ಧರಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕಿಗೆ ಬರೆ ಹಾಕಲು ಹೊರಟಿದೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ನಿವೇಶನ, ಕಟ್ಟಡ, ಭೂಮಿ ಸೇರಿ ಸ್ಥಿರಾಸ್ತಿಯ ಮಾರ್ಗಸೂಚಿ ದರವನ್ನು ಮುಂದಿನ ಅಕ್ಟೋಬರ್ 1 ರಿಂದ ಹೆಚ್ಚಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ಕನಿಷ್ಠ ಶೇ.20ರಿಂದ ಶೇ.30ರ ವರೆಗೆ ದರ ಪರಿಷ್ಕರಣೆ ಆಗುವ ಬಗ್ಗೆ ಚರ್ಚೆ ನಡೆದಿದೆ. ಇಷ್ಟೊಂದು ದೊಡ್ಡ ಮಟ್ಟಿನ ದರ ಪರಿಷ್ಕರಣೆ ರಾಜ್ಯದ ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಲಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕಸರತ್ತು ನಡೆಸುತ್ತಿರುವ ಸರಕಾರ ಜನರಿಗೆ ಪರೋಕ್ಷವಾಗಿ ಆರ್ಥಿಕ ಹೊರೆ ಹೊರಿಸುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಜನರು ಸಾಮಾನ್ಯವಾಗಿ ಸಾಲ ಸೋಲ ಮಾಡಿ ಆಸ್ತಿ, ನಿವೇಶ ಅಥವಾ ಮನೆ ಖರೀದಿಸುತ್ತಾರೆ. ಆದರೆ ಅಂತಹಾ ಕುಟುಂಬದವರಿಗೆ ಮುಂದೆ ಮುದ್ರಾಂಕ ಶುಲ್ಕ ಏರಿಕೆಯಿಂದ ತೀವ್ರ ಸಮಸ್ಯೆ ಆಗಲಿದೆ. ಬಹುತೇಕರಿಗೆ ಆಸ್ತಿ ಖರೀದಿ ಕೈಗೆಟಕದಂತೆ ಆಗಲಿದೆ. ಆದ್ದರಿಂದ ದರ ಪರಿಷ್ಕರಣೆಯನ್ನು ಕೈ ಬಿಟ್ಟು ಜನಸಾಮಾನ್ಯರ ಒಳಿತಿನ ಬಗ್ಗೆ ಚಿಂತಿಸಿ ಮುಂದುವರಿಯಬೇಕು ಎಂದು ಶಾಸಕ ಕಾಮತ್ ಸಲಹೆ ನೀಡಿದ್ದಾರೆ.














