ಇತ್ತೀಚಿನ ಸುದ್ದಿ
ಮುಂದಿನ ದಸರಾ ವೇಳೆ ಅರಮನೆ ಆವರಣದಲ್ಲಿ ಯಕ್ಷಗಾನ ಪ್ರದರ್ಶನ: ಮೈಸೂರು ರಾಜ ವಂಶಸ್ಥ ಯದುವೀರ್
15/03/2022, 09:51
ಸಂಪಾಜೆ(reporterkarnataka.com):
ಮೈಸೂರಿನ ಅರಮನೆಗೂ ದಕ್ಷಿಣ ಕನ್ನಡದ ಯಕ್ಷಗಾನ ಕಲೆಗೂ ಅವಿನಾಭಾವ ಸಂಬಂಧವಿದೆ.
ಮುಂದಿನ ದಸರಾ ಸಂದರ್ಭದಲ್ಲಿ ಸರಕಾರದ ಜೊತೆಗೆ ಮಾತುಕತೆ ನಡೆಸಿ ಅರಮನೆ ಅವರಣದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮೈಸೂರು ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಸಂಪಾಜೆ ಸಮೀಪದ ಕಲ್ಲುಗುಂಡಿ ಶಾಲಾ ಆವರಣದಲ್ಲಿ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆದ 31ನೇ ವರ್ಷದ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರಿನ ಅರಮನೆಗೂ ಯಕ್ಷಗಾನ ಕಲೆಗೂ ಅವಿನಾಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಅರಮನೆಗೆ ಯಕ್ಷಗಾನ ಕಲಾವಿದರನ್ನು ಕರೆಸಿದ್ದರು. ಮುಂದಿನ ದಸರಾ ಸಂದರ್ಭದಲ್ಲಿ ಸರಕಾರದ ಜೊತೆಗೆ ಮಾತುಕತೆ ನಡೆಸಿ ಅರಮನೆ ಅವರಣದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.
ಯಕ್ಷಗಾನ ಕಲೆಗೆ ಶ್ಯಾಮ್ ಭಟ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಈ ಹಿಂದೆ ಈಶ್ವರ ಮಂಗಲದ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಸಂಪಾಜೆಯ ಈ ಪ್ರದೇಶಕ್ಕೂ ಭೇಟಿ ನೀಡಿದ್ದೆ ಎಂದು ಯದುವೀರ್ ಸ್ಮರಿಸಿದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮಿಗಳು ಯಕ್ಷೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿ, ಶುಭ ಹಾರೈಸಿದರು. ಇದೇ ವೇಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.