ಇತ್ತೀಚಿನ ಸುದ್ದಿ
ಸ್ಮಾರ್ಟ್ ಮೀಟರ್ ಟೆಂಡರ್ ನಲ್ಲಿ ಬಹುಕೋಟಿ ಅವ್ಯವಹಾರ: ಮಾಜಿ ಡಿಸಿಎಂ, ಬಿಜೆಪಿ ನಾಯಕ ಡಾ. ಅಶ್ವತ್ಥ ನಾರಾಯಣ್ ಆರೋಪ
26/03/2025, 20:58

ಬೆಂಗಳೂರು(reporterkarnataka.com): ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ಟೆಂಡರ್ ನಲ್ಲಿ ಸುಮಾರು 15,568 ಕೋಟಿ ರೂಪಾಯಿಯ ಭಾರೀ ಅವ್ಯವಹಾರ ನಡೆದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಹಾಲಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಆರೋಪಿಸಿದ್ದಾರೆ.
ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಸ್ಕಾಂ ಮತ್ತು ಇತರ ಎಸ್ಕಾಂಗಳ ಸ್ಮಾರ್ಟ್ ಮೀಟರ್
ಅವ್ಯವಹಾರದ ಗಾತ್ರ ಇನ್ನೂ ದೊಡ್ಡದೇ ಇದೆ. ಎಸ್ಕಾಂಗಳು ಕೆಇಆರ್‍ಸಿ ನಿಯಮಗಳಿಗೆ ಬದ್ಧವಾಗಿರಬೇಕು. ಕೆಇಆರ್‍ಸಿ ನಿಯಮಗಳಲ್ಲಿ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ಎಲ್ಲೂ ಹೇಳಿಲ್ಲ ಎಂದು ಮಾಜಿ ಡಿಸಿಎಂ ವಿವರಿಸಿದರು. ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಬಹುದೇ ಹೊರತು ಖಾಯಂ ಗ್ರಾಹಕರು, ಹೊಸ ಗ್ರಾಹಕರಿಗೆ ಈ ಸ್ಮಾರ್ಟ್ ಮೀಟರನ್ನು ಕಡ್ಡಾಯ ಮಾಡುವಂತಿಲ್ಲ ಎಂದ ಅವರು ಪವರ್ ಪಾಯಿಂಟ್ ಪ್ರದರ್ಶನವನ್ನೂ ನೀಡಿದರು.
ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ನಿಯಮಾವಳಿ ಪ್ರಕಾರವೂ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲ. ಕೆಟಿಪಿಪಿ ಕಾಯ್ದೆಯಡಿ ಬಿಡ್ ಕೆಪ್ಯಾಸಿಟಿಯನ್ನು ಟೆಂಡರ್ ನಲ್ಲಿ ತಿಳಿಸಿಲ್ಲ. ಅದು 6,800 ಕೋಟಿ ಇರಬೇಕಿತ್ತು. ಬಿಡ್ಡಿಂಗ್ ಸಾಮಥ್ರ್ಯ ಇಲ್ಲದಿರುವುದೇ ಮೊದಲ ಹಗರಣ ಎಂದು ಅವರು ದೂರಿದರು.
ವ್ಯವಹಾರವು
ಕೆಟಿಪಿಪಿ ಕಾಯ್ದೆ ಪ್ರಕಾರ 1,920 ಕೋಟಿ ಇರಬೇಕಾಗಿತ್ತು. ಟೆಂಡರ್ ನಲ್ಲಿ ಬರೀ 107 ಕೋಟಿ ಎಂದು ನಮೂದಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬ್ಲ್ಯಾಕ್ ಲಿಸ್ಟ್ ಸೇರಿದ ಬಿಸಿಐಟಿಎಸ್ ಎಂಬ ಕಂಪೆನಿಗೆ ನೀಡಲಾಗಿದೆ ಎಂದು ದೂರಿದರು.
ಈ ಯೋಜನೆಯ ಅಂದಾಜು ವೆಚ್ಚ 571 ಕೋಟಿ ಎಂದು ತಿಳಿಸಿ ನಂತರ ತಿದ್ದುಪಡಿ ಮಾಡಿದ್ದಾರೆ. ಟೆಂಡರ್ ಒಟ್ಟು ಮೊತ್ತ ತಿಳಿಸದೇ ಟೆಂಡರ್ ಕರೆಯಲಾಗಿದೆ. ಕೆಟಿಪಿಪಿ ಕಾಯ್ದೆಯೂ ಇಲ್ಲ; ಕೇಂದ್ರ ಸರಕಾರದ ನಿಯಮಾವಳಿಯನ್ನೂ ಜಾರಿ ಮಾಡಿಲ್ಲ. ಸ್ಮಾರ್ಟ್ ಮೀಟರ್ ತಯಾರಿಸದ, ಅಳವಡಿಸದ, ಡಿಜಿಟಲ್ ಮೀಟರ್ ಅಳವಡಿಸಿದ ವ್ಯಕ್ತಿಯನ್ನು ಪರಿಗಣಿಸಿದ್ದಾರೆ.
ಮೈಸೂರಿನಲ್ಲಿ ಗರಿಷ್ಠ ಸ್ಮಾರ್ಟ್ ಮೀಟರ್ ತಯಾರಾಗುತ್ತದೆ. ಅರ್ಹರನ್ನು ಹೊರಗಿಟ್ಟು ಬರೀ ಫೋನ್ ತಯಾರಕರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಕೇಂದ್ರ ಸರಕಾರದ ನಿಯಮಗಳ ಪ್ರಕಾರ 1 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸಿದ ಅನುಭವ ಇರಬೇಕು. ಅದನ್ನು ಬಿಟ್ಟು ಉತ್ಪಾದನೆಯೇ ಮಾಡದ 10 ಲಕ್ಷ ಸಾಮಾನ್ಯ ಮೀಟರ್ ಅಳವಡಿಕೆಯನ್ನೇ ಮಾನದಂಡ ಮಾಡಿದ್ದಾರೆ. ಮೊದಲು ಟ್ರಾನ್ಸ್
ಫಾರ್ಮರ್, ಫೀಡರ್ ಗಳಿಗೆ ಇದನ್ನು ಅಳವಡಿಸಿ ಸಾಗಾಟದಲ್ಲಿ ಆಗುವ ನಷ್ಟವನ್ನು ತಿಳಿಯಬೇಕಿತ್ತು. ಬಳಿಕ ರಾಜ್ಯದ ಗ್ರಾಹಕರಿಗೆ ಇದನ್ನು ಅಳವಡಿಸಬೇಕಿತ್ತು. ಕೇಂದ್ರದ ಆರ್‍ಡಿಎಸ್‍ಎಸ್ ಅಡಿ ಸಿಗುವ 3 ಸಾವಿರ ಕೋಟಿಯನ್ನು ಬಳಸಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಆಳ್ವಿಕೆಯ ಹಿಮಾಚಲ ಪ್ರದೇಶದಲ್ಲಿ, ತೆಲಂಗಾಣ ಹಾಗೂ ಎಡಪಕ್ಷ ಆಡಳಿತದ ಕೇರಳದಲ್ಲಿ ಕಡಿಮೆ ಮೊತ್ತಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಒಂದೊಂದು ಮೀಟರ್ ಗೆ 17 ಸಾವಿರ ಆಗುತ್ತದೆ. ಅದೇ ಬೇರೆ ರಾಜ್ಯದಲ್ಲಿ ಪ್ರತಿ ಮೀಟರ್‍ಗೆ 7,740 ರೂ. ಆಗಲಿದೆ. ಬೆಸ್ಕಾಂ ಮತ್ತಿತರ ಎಸ್ಕಾಂಗೆ ಹೋಲಿಸಿದರೆ ಇದು 9,260 ರೂ. ಹೆಚ್ಚು ಎಂದು ತಿಳಿಸಿದರು.
ಬಿಹಾರದಲ್ಲೂ ಇದೇ ಮಾದರಿಯ ಹಗರಣ ನಡೆದಿದ್ದು, ಐಎಎಸ್ ಅಧಿಕಾರಿ, ಸಚಿವರು ಬಂಧಿತರಾಗಿದ್ದಾರೆ. ಸ್ಮಾರ್ಟ್ ಮೀಟರ್, ಸಾಫ್ಟ್ ವೇರ್, ಔಟ್‍ಲೆಟ್, ಸಿಬ್ಬಂದಿ ಸಂಬಳವನ್ನು ವೆಚ್ಚವಾಗಿ ತೋರಿಸಿದ್ದಾರೆ ಎಂದರು. ಕೆಟಿಪಿಪಿ ಕಾಯ್ದೆಯನ್ನು ಎಲ್ಲ ಹಂತದಲ್ಲೂ ಉಲ್ಲಂಘಿಸಿದ್ದಾರೆ. ಭಂಡತನ, ಧೈರ್ಯದಲ್ಲಿ ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
*ಹಗಲು ದರೋಡೆ;* ಸರಕಾರ ಇದಕ್ಕೆ ಉತ್ತರ ಕೊಡಬೇಕು. ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡಲು ಕಾನೂನಿಲ್ಲದೇ ಅದನ್ನು ಕಡ್ಡಾಯ ಮಾಡುತ್ತಿದ್ದಾರೆ. ಬ್ಲ್ಯಾಕ್ ಲಿಸ್ಟ್ ಆದವರಿಗೆ ಕೊಡಲಾಗಿದೆ ಎಂದು ದೂರಿದರು. ಸತ್ಯವನ್ನು ಹೇಳಿದ್ದೇವೆ. ಇದು ರಾಜಕೀಯ ಪ್ರೇರಿತ ಅಲ್ಲ ಎಂದು ಸ್ಪಷ್ಟಪಡಿಸಿದರು. ಸರಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಮರ್ಪಕವಾಗಿ ಬಿಸಿ ಮುಟ್ಟಿಸುವುದಾಗಿ ಅವರು ಎಚ್ಚರಿಸಿದರು.
ಸದನದಲ್ಲೂ ಈ ವಿಷಯ ಪ್ರಸ್ತಾಪವಾಗಿದೆ. ಸ್ಮಾರ್ಟ್ ಮೀಟರ್ ಮತ್ತು ಇದರ ಸಾಫ್ಟ್ ವೇರ್ ವಿಷಯದಲ್ಲಿ ಭ್ರಷ್ಟಾಚಾರದ ಕುರಿತು ದಾಖಲೆ ಸಮೇತ ತಿಳಿಸುವುದಾಗಿ ಡಾ. ಅಶ್ವಥ್ ನಾರಾಯಣ್ ಹೇಳಿದರು.
ಶಾಸಕ ಎಸ್.ಆರ್ ವಿಶ್ವನಾಥ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಉಪಸ್ಥಿತರಿದ್ದರು.