ಇತ್ತೀಚಿನ ಸುದ್ದಿ
ಮೂಡಿಗೆರೆ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ನಯನಾ ಮೋಟಮ್ಮಗೆ ಬಹುತೇಕ ಫಿಕ್ಸ್: ನಾಗರತ್ನಾ ಕೈಗೆ ಗುಡ್ ಬೈ!
17/03/2023, 20:12

ಚಿಕ್ಕಮಗಳೂರು(reporterkarnataka.com): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ. ಅದರಲ್ಲೂ ಮೂಡಿಗೆರೆ ಕ್ಷೇತ್ರದಲ್ಲಿ ಉಭಯ ಪ್ರಮುಖ ಪಕ್ಷಗಳು ಹಲವು ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾಗುತ್ತಿವೆ. ನಿನ್ನೆ ದಿನ ಬಿಜೆಪಿಯೊಳಗೆ ಹೈಡ್ರಾಮಾ ನಡೆದರೆ, ಇವತ್ತು ಕಾಂಗ್ರೆಸ್ ಗೆ ಸ್ಥಳೀಯ ಮುಖಂಡೆಯೊಬ್ಬರು ಗುಡ್ ಬೈ ಹೇಳಿದ್ದಾರೆ.
ರಾಜಕೀಯ ಅಂದ್ರೇನೆ ಹೀಗೆ. ಏನು ಬೇಕಾದರೂ ಘಟಿಸಬಹುದು. ಶತ್ರುಗಳು ಮಿತ್ರರಾಗುತ್ತಾರೆ, ಮಿತ್ರರು ಶತ್ರುಗಳಾಗುತ್ತಾರೆ. ನಿನ್ನೆ ಸ್ಥಳೀಯ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಅವರ ಪಕ್ಷದವರೇ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ಶಾಸಕರು ಪತ್ರಿಕಾಗೋಷ್ಠಿ ಕರೆದು ಕಣ್ಣೀರು ಹಾಕಿದ್ದಾರೆ. ಇವತ್ತು ಕೈ ಪಾಳಯದಲ್ಲಿ ದೊಡ್ಡ ವಿದ್ಯಮಾನ ನಡೆದಿದೆ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್. ಆರ್. ನಾಗರತ್ನಾ ರಾಜೀನಾಮೆ ನೀಡಿದ್ದಾರೆ. ಮೂಡಿಗೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದ ನಾಗರತ್ನಾ ಅವರು ಮಾಜಿ ಶಾಸಕಿ ಮೊಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅವರಿಗೆ ಟಿಕೆಟ್ ಹೆಚ್ಚುಕಮ್ಮಿ ಪಕ್ಕಾ ಎನ್ನುವ ಮಾಹಿತಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಿದ್ದಿದ್ದಾರೆ.
2018ರ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವೆ ಮೋಟಮ್ಮ ಅವರು ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಸೋಲು ಅನುಭವಿಸಿದರು. ಇದಾದ ನಂತರ ಮೋಟಮ್ಮ ಅವರ ಪುತ್ರಿ ನಯನಾ ಅವರನ್ನು ಮುನ್ನಲೆಗೆ ತರುವ ಪ್ರಯತ್ನ ಮೋಟಮ್ಮ ಅಭಿಮಾನಿಗಳಿಂದ ನಡೆಯಿತು. ಇದಕ್ಕೆ ಕಾಂಗ್ರೆಸ್ ನ ಒಂದು ಬಣ ವಿರೋಧ ಕೂಡ ವ್ಯಕ್ತಪಡಿಸುತ್ತಲೇ ಬಂದಿದೆ. ಮೋಟಮ್ಮ ವಿರುದ್ಧ ಹಲವು ಸಭೆಗಳನ್ನು ಕೂಡ ನಡೆಸಲಾಗಿದೆ. ಇವೆಲ್ಲ ಹೋರಾಟದ ಮಧ್ಯೆ ನಯನಾ ಅವರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.