ಇತ್ತೀಚಿನ ಸುದ್ದಿ
ಮೂಡುಬಿದರೆ: ಮಹಾಕವಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ ದ ‘ಮಂದಾರ ಮಂಥನ’ ಸಂಪನ್ನ
24/07/2022, 08:12

ಮೂಡುಬಿದರೆ(reporterkarnataka.com): ಮೂಡುಬಿದರೆಯ ಆಳ್ವಾಸ್ ತುಳು ಅಧ್ಯಯನ ಕೇಂದ್ರ ಮತ್ತು ಮಂದಾರ ಪ್ರತಿಷ್ಠಾನದ ಸಹಯೋಗದಲ್ಲಿ ತುಳು ವಾಲ್ಮೀಕಿ, ಮಹಾಕವಿ, ಮಂದಾರ ಕೇಶವ ಭಟ್ಟರ “ಮಂದಾರ ರಾಮಾಯಣ”ದ ವಾಚನ ಮತ್ತು ವ್ಯಾಖ್ಯಾನ -“ಮಂದಾರ ಮಂಥನ” ಕಾರ್ಯಕ್ರಮ ಶನಿವಾರ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಪ್ರಭಾಕರ ಜೋಶಿ ನೆರವೇರಿಸಿದರು. ಬಳಿಕ ಮಾತನಾಡಿದ ಡಾ. ಜೋಶಿ ಅವರು, ಹಲವರು ಹಲವು ರೀತಿಯಲ್ಲಿ ರಾಮಾಯಣವನ್ನು ಬರೆದರು, ವ್ಯಾಖ್ಯಾನಿಸಿದರು. ಮಂದಾರ ರಾಮಾಯಣದಲ್ಲಿ ಕವಿ ಮಂದಾರರು ಸಾಮಾನ್ಯರಲ್ಲಿ ಸಾಮಾನ್ಯರಿಗೂ ಅರ್ಥವಾಗುವಂತೆ ಬಹಳ ಸುಲಭ ಆಡು ಭಾಷೆಗಳನ್ನೇ ಬಳಸಿ ರಾಮಾಯಣವನ್ನು ಬರೆದಿರುವುದು ವಿಶೇಷವೇ ಸರಿ ಎಂದರು.
ಮಂದಾರರ ಮತ್ತು ತನ್ನ ಸುಮಾರು 30 ವರ್ಷಗಳ ಸಂಬಂಧವನ್ನು ವಿದ್ಯಾರ್ಥಿಗಳಿಗೆ ಅವರು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ರಾಜೇಶ್ ಆಳ್ವ (ಅಧ್ಯಕ್ಷರು, ತುಳು ವರ್ಲ್ಡ್ ), ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಕುರಿಯನ್, ಮಂದಾರ ಕೇಶವ ಭಟ್ಟರ ಮಗಳು ಶಾರದಾಮಣಿ, ಪತ್ರಕರ್ತರಾದ ಡಾ. ರಾಜೇಶ್ ಭಟ್ ಮಂದಾರ ಆಗಮಿಸಿದ್ದರು.
ಮಂದಾರ ರಾಮಾಯಣದ ವಾಚನ- ವ್ಯಾಖ್ಯಾನ ಕಾರ್ಯಕ್ರಮ ಡಾ. ದಿನಕರ ಪಚ್ಚನಾಡಿ, ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ಕಂಠದಿಂದ ಉತ್ತಮವಾಗಿ ಮೂಡಿ ಬಂತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ತುಳು ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಮೋದ್ ಸಪ್ರೆ ವಂದಿಸಿದರು.