ಇತ್ತೀಚಿನ ಸುದ್ದಿ
ವೆನ್ಲಾಕ್ ನಲ್ಲಿ ಐಸಿಯು ಘಟಕಗಳ ಇಳಿಕೆಯಿಂದಾಗಿ ರೋಗಿಗಳ ಪರದಾಟ: ಶಾಸಕ ವೇದವ್ಯಾಸ ಕಾಮತ್ ಖೇದ
10/11/2025, 11:59
ಮಂಗಳೂರು(reporterkarnataka.com): ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದರಿಂದ ರೋಗಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಈ ಬಗ್ಗೆ ಆರೋಗ್ಯ ಸಚಿವರು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಪತ್ರದ ಮೂಲಕ ಆಗ್ರಹಿಸಿದರು.
ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಾದ ವೆನ್ಲಾಕ್ ನಲ್ಲಿ ಕೇವಲ 16 ತೀವ್ರ ನಿಗಾ ಘಟಕಗಳಿದ್ದವು. ಆ ನಂತರ ರೋಗಿಗಳಿಗೆ ಅನುಕೂಲವಾಗಲು ಹಂತ ಹಂತವಾಗಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಅಂತಿಮವಾಗಿ ಜನರು ಕೊರೋನ ಸಂಕಷ್ಟದಲ್ಲಿ ಸಿಲುಕಿದ್ದಾಗ, ಬಿಜೆಪಿ ಸರ್ಕಾರದ ವಿಶೇಷ ಸಹಕಾರದೊಂದಿಗೆ 115 ಕ್ಕೂ ಅಧಿಕ ತೀವ್ರ ನಿಗಾ ಘಟಕ ಹಾಗೂ 250 ಕ್ಕೂ ಹೆಚ್ಚು ಆಕ್ಸಿಜನ್ ಬೆಡ್ ಗಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರವು ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು ತೀವ್ರ ನಿಗಾ ಘಟಕಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಸಿ ರೋಗಿಗಳು ಈ ಹಿಂದಿನಂತೆ ಪರದಾಡುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೆನ್ಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅಲ್ಲದೇ ಮಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಜನರ ಅಗತ್ಯಕ್ಕನುಗುಣವಾಗಿ ತೀವ್ರನಿಗಾ ಘಟಕಗಳನ್ನು ಹೆಚ್ಚಿಸಬೇಕೇ ಹೊರತು ಕಡಿಮೆಗೊಳಿಸಬಾರದು. ಸ್ಟಾಫ್ ನರ್ಸ್ ಗಳ ಕೊರತೆಯಿದ್ದರೆ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಿ. ಅದು ಬಿಟ್ಟು ಜನಸಾಮಾನ್ಯರ ಆರೋಗ್ಯದ ವಿಷಯದಲ್ಲಿ ಚೆಲ್ಲಾಟವಾಡುವುದು ಬೇಡ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೇ ರಾಜ್ಯದ ಆರೋಗ್ಯ ಸಚಿವರಾಗಿದ್ದರೂ ಇಂತಹ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.













