ಇತ್ತೀಚಿನ ಸುದ್ದಿ
Micro Finance | ಅಧ್ಯಾದೇಶ ಉಲ್ಲಂಘನೆ ಮಾಡಿದರೆ 10 ವರ್ಷ ಜೈಲು, 5 ಲಕ್ಷ ದಂಡ: ಕೋಲಾರ ಜಿಲ್ಲಾಧಿಕಾರಿ ಎಚ್ಚರಿಕೆ
19/02/2025, 14:07

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಮೈಕ್ರೋ ಫೈನಾನ್ಸ್ ಹಾವಳಿಗೆ ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗೆ ಮುಕ್ತಿ ನೀಡುವ ಸಲುವಾಗಿ ರಾಜ್ಯ ಸರ್ಕಾರ ಮಹತ್ವದ ಅಧ್ಯಾದೇಶ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹೇಳಿದರು.
ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಕಿರುಸಾಲ ಹಾಗೂ ಸಣ್ಣ ವ್ಯವಹಾರಗಳ ಆಧ್ಯಾದೇಶ ಜಾರಿ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಆಧ್ಯಾದೇಶವು ಜಾರಿಯಾದ 30 ದಿನಗಳ ಒಳಗೆ ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿ ಸಂಸ್ಥೆಗಳು ಕಡ್ಡಾಯ ನೊಂದಣಿ ಮಾಡಿಕೊಳ್ಳಬೇಕು. ನಮ್ಮ ಕೋಲಾರ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆಸ್ತಿ ಜಪ್ತಿ ಮನೆಗಳ ಜಪ್ತಿ ಸೇರಿದಂತೆ ಮನೆಗಳ ಮೇಲೆ ನೋಟಿಸ್ ಅಂಟಿಸುವುದು. ಮುಂತಾದ ಇಂತಹ ಪ್ರಕರಣಗಳು ಕಂಡು ಬಂದಿಲ್ಲ ಒಂದು ವೇಳೆ ಕಂಡುಬಂದರೆ ಅವರ ವಿರುದ್ಧ ಆಧ್ಯಾದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಲ ಎಂದರೆ ಯಾವುದೇ ವ್ಯಕ್ತಿಗೆ ನೀಡಲಾದ ಹಣ, ರೈತರನ್ನು ದುರುಪಯೋಗ ಮಾಡಿಕೊಂಡು ನಿಮಗೆ ಸಾಲದ ರೂಪದಲ್ಲಿ ಬೀಜಗಳನ್ನು ವಿತರಿಸುವುದು, ಗೊಬ್ಬರ ಇತರ ವಸ್ತುಗಳ ರೂಪದಲ್ಲಿ ಮುಂಗಡವು ಸಹ ಸಾಲವೇ ಆಗಿದೆ ಹಾಗೂ ಕೈ ಸಾಲವು ಸಹ ಸಾಲವೇ ಎಂದು ಅವರು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಒಟ್ಟು 17 ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಂದಣಿ ಮಾಡಿಕೊಂಡಿದ್ದು 98 ಶಾಖೆಗಳನ್ನು ಹೊಂದಿದೆ. ಅದರಲ್ಲಿ 242937 ಜನರು ಸಾಲ ಪಡೆದುಕೊಂಡಿದ್ದಾರೆ ಒಟ್ಟು 1703 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಯುತ್ತಿದೆ ಅದರಲ್ಲಿ ಸಾಲವನ್ನು ಕಟ್ಟದೆ ಇರುವ 28294 ಖಾತೆಗಳಿವೆ ಹಾಗೂ ಖಾಸಗಿ ಲೇವಾದೇವಿದಾರರು ಮತ್ತು ಇತರೆ ಹಣಕಾಸಿನ ವ್ಯವಹಾರಗಳನ್ನು ಮಾಡುವವರು 2674 ಕೋಟಿ ರೂಪಾಯಿಗಳನ್ನು ವ್ಯವಹಾರ ಮಾಡುತ್ತಿರುವುದಾಗಿ ಅವರು ನುಡಿದರು.
ಅಧ್ಯಾದೇಶ ಕಾಯ್ದೆಯ ಪ್ರಕಾರ ಮಾರ್ಚ್ 11ರ ಒಳಗೆ ನೊಂದಣಿಯನ್ನು ಮಾಡಿಕೊಳ್ಳಬೇಕಾಗಿದೆ. ಈ ಆಧ್ಯಾದೇಶದಂತೆ ಜಿಲ್ಲಾಧಿಕಾರಿಯನ್ನು ನೊಂದಣಾಧಿಕಾರಿಯಾಗಿ ಮಾಡಲಾಗಿದೆ. ನೋಂದಣಿ ಪರವಾನಿಗೆ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ ತದನಂತರ ರಿನಿವಲ್ ಮಾಡಿಕೊಳ್ಳಬೇಕು. ಅಧ್ಯಾದೇಶ ಉಲ್ಲಂಘನೆ ಮಾಡಿದ ಪ್ರಕರಣಗಳಿದ್ದಲ್ಲಿ, ಅಂತಹ ಸಂಸ್ಥೆಗಳ ಪರವಾನಿಗೆ ರದ್ದು ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಿರುಸಾಲ ನೀಡುವ ಸಂಸ್ಥೆಗಳು ನೊಂದಣಿ ಮಾಡಿಕೊಳ್ಳಲು ಕೆಲವು ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಯಾವುದೇ ಗ್ರಾಹಕರಿಗೆ ಸಾಲ ಕೊಡಬೇಕಾದಲ್ಲಿ, ಬಡ್ಡಿದರವನ್ನು ಸ್ಪಷ್ಟವಾಗಿ ತಿಳಿಸಬೇಕು. ಮರು ಪಾವತಿ ಮಾಡುವಾಗ ತಪ್ಪದೆ ರಶೀದಿ ನೀಡಬೇಕು. ವ್ಯವಹಾರ ಎಲ್ಲವೂ ಕನ್ನಡದಲ್ಲೇ ಕಡ್ಡಾಯವಾಗಿ ಮಾಡಬೇಕು. ನೊಂದಣಿಯಾದ ಸಾಲದ ಅಧಿಕೃತ ಕಚೇರಿ ಜಿಲ್ಲೆಯಲ್ಲಿ ತೆರದಿರಬೇಕು. ನೊಂದಣಿ ಯಾದ ಸಾಲಗಾರ ಕಂಪನಿ ಎಲ್ಲಾ ವಿವರಗಳನ್ನು ಒಳಗೊಂಡಂತೆ ವರ್ಷಕೊಮ್ಮೆ ಜಿಲ್ಲಾಧಿಕಾರಿ ಕಛೇರಿಗೆ ದಾಖಲೆ ಸಲ್ಲಿಸಬೇಕು. ಸಾಲ ವಸೂಲಾತಿಗಾಗಿ ಬಲವಂತದ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಾರದು. ಮನೆಗಳ ಬಳಿ ನೋಟಿಸ್, ಜಪ್ತಿ, ಹಾಗೂ ತೊಂದರೆ ಮಾಡಿದರೆ, ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುತ್ತದೆ. ಸದರಿ ಅಧ್ಯಾದೇಶದಲ್ಲಿ ನೇರವಾಗಿ ಎಫ್.ಐ.ಆರ್ ದಾಖಲಿಸುವ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ.
ಅಧ್ಯಾದೇಶದ ಉಲ್ಲಂಘನೆ ಮಾಡಿದರೆ, 10 ವರ್ಷಗಳ ವರೆಗೆ ಜೈಲುವಾಸ 5 ಲಕ್ಷಗಳ ದಂಡವಿಧಿಸುವ ಅವಕಾಶಗಳಿವೆ ಸಾರ್ವಜನಿಕರಿಗೆ ಕಿರುಕಳ ನೀಡುವ ಪೈನಾನ್ಸ್ ಸಂಸ್ಥೆಗಳ ವಿರುದ್ಧ ಹೆಲ್ಸ್ ಲೈನ್ ಸಂಖ್ಯೆಗೆ ದೂರು ನೀಡಬಹುದಾಗಿದೆ. ಜಿಲ್ಲೆಯಲ್ಲಿ ಈ ಸಂಬಂಧ ಪರೀಶೀಲನಾ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯು ಲೇವಾದೇವಿ ಹಾಗೂ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಮೇಲೆ ನಿಗಾವಹಿಸುತ್ತದೆ. ಈ ಆಧ್ಯಾದೇಶವು ಜಾರಿಯಾದ ದಿನದಿಂದ ಹಿಂದೆ ಯಾವುದೇ ಅನಧಿಕೃತ ಲೇವಾದೇವಿ ವ್ಯಾವಹಾರಗಳು ಜಾರಿಯಲ್ಲಿದ್ದಲ್ಲಿ, ಈ ಆಧ್ಯಾದೇಶವು ಜಾರಿಯಾದ ದಿನದಿಂದ ಅವಲ್ಲವನ್ನು ರದ್ದು ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ಮಾತನಾಡಿ ಈ ಕಾಯ್ದೆಯ ಅಡಿಯಲ್ಲಿ ನಮಗೆ ಯಾವುದೇ ದೂರುಗಳು ಬಂದರೆ ಪ್ರಾಥಮಿಕ ವರದಿಯನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ಕೊಟ್ಟಿದೆ, ಒಂದು ವೇಳೆ ಗ್ರಾಹಕರು ಬಂದು ದೂರನ್ನು ನೀಡದೆ ಇದ್ದರೆ ಜಿಲ್ಲಾ ಸಮಿತಿಗೆ ಮಾಹಿತಿ ಬಂದರೆ. ಮಾಹಿತಿ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳದೆ ಅಕ್ರಮವಾಗಿ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದರೆ, ಅಂತಹ ಪ್ರಕರಣಗಳನ್ನು ತಕ್ಷಣ ಸ್ವಯಂ ಪ್ರೇರಿತ ದೂರು ದಾಖಲಿಸಿ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದರು.
ಬೇರೆ ರಾಜ್ಯಗಳಿಂದ ಬಂದು ನಮ್ಮ ಭಾಗದಲ್ಲಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ, ಅವರಿಗೆ ಯಾವುದೇ ಆಸ್ಪದ ನೀಡದೆ ಸುಮೊಟೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ನಮಗೆ ತಾಂತ್ರಿಕ ಸಾಕ್ಷಗಳು ದೊರೆಯುತ್ತವೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಸಲ್ಲಿಸಿದರೆ ನಾವು ತಕ್ಷಣ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಅವರು ಮಾತನಾಡಿ ಬಲವಂತಕರಣ ಬಗ್ಗೆ ಅಧ್ಯಾದೇಶ ಕಾಯ್ದೆಯಲ್ಲಿ 8ನೇ ಕಲಾಂನಲ್ಲಿ ಸವಿಸ್ತಾರವಾಗಿ ತಿಳಿಸಿದ್ದಾರೆ. ಮೈಕ್ರೋ ಫೈನಾನ್ಸ್, ಲೇವಾದೇವಿ ದಾರರು ಯಾವುದೇ ವ್ಯಕ್ತಿಯು ತಿಂಗಳಿಗೆ, ವಾರಕ್ಕೆ, ಬಡ್ಡಿ ವ್ಯವಹಾರ ಮಾಡುವವರು, ವಸ್ತು ಅಥವಾ ಹಣದ ರೂಪದಲ್ಲಿ ಸಾಲವನ್ನು ನೀಡುವವರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಮತ್ತು ಸಾಲದ ವಸೂಲಿಗೆ ತಾವು ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರಿಗೆ ಪೊಲೀಸ್ ತನಿಖೆಯನ್ನು ಮಾಡಿಸಿ ಯಾವುದೇ ಪ್ರಕರಣಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಆಯ್ಕೆ ಮಾಡಿಕೊಳ್ಳಬೇಕು. ಯಾವುದೇ ಅನಧಿಕೃತ ವ್ಯಕ್ತಿಗಳು ಹೋಗಿ ಸಾಲ ವಸೂಲತಿಯನ್ನು ಮಾಡುವಂತಿಲ್ಲ ಮತ್ತು ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಸಾರ್ವಜನಿಕರು ಸಹಾಯವಾಣಿ ಸಂ.112 ಯನ್ನು ಬಳಸಿಕೊಂಡು ತಮ್ಮ ದೂರನ್ನು ಸಲ್ಲಿಸಬಹುದು ಎಂದು ತಿಳಿಸಿದರು.