ಇತ್ತೀಚಿನ ಸುದ್ದಿ
ಮೇಕೇರಿ ಶ್ರೀ ಗೌರಿಶಂಕರ ದೇವಾಲಯದಲ್ಲಿ ವಿಜ್ರಂಭಣೆಯ ಮಹಾಶಿವರಾತ್ರಿ: 8 ದಿಕ್ಕುಗಳಿಂದ ಹೊರೆ ಕಾಣಿಕೆ ಸಮರ್ಪಣೆ
09/03/2024, 12:24
ಮಡಿಕೇರಿ(reporterkarnataka.com): ಇಲ್ಲಿಗೆ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರುಗಿತು. ಶಿವರಾತ್ರಿ ಹಿನ್ನೆಲೆ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪುಜಾ ಕೈಂಕರ್ಯಗಳು ನೆರವೇರಿತು.
ಗ್ರಾಮದ 8 ದಿಕ್ಕುಗಳಿಂದ ಈಶ್ವರ ಆರಾಧನೆಯ ವಿಶೇಷ ಸೇವೆಯಾಗಿ ಹೊರೆ ಕಾಣಿಕೆ ಮೆರವಣಿಗೆ ಆಕರ್ಷಣಿಯವಾಗಿ ನಡೆಯಿತು. ಗ್ರಾಮದ 8 ದಿಕ್ಕುಗಳಿಂದ ಮಹಿಳೆಯರು ಬರಿಗಾಲಿನಲ್ಲಿ ಹೊರೆಕಾಣಿಕೆಯ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಅಕ್ಕಿ, ದೀಪದ ಎಣ್ಣೆ, ಅಡುಣೆ ಎಣ್ಣೆ, ವಿವಿಧ ಬಗೆಯ ತರಕಾರಿ, ಹೂವು, ಹಣ್ಣುಗಳು ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಈಶ್ವರನಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ಚಂಡೆಮೇಳದೊಂದಿಗೆ ನಡೆಯುವ ಈ ಮೆರವಣಿಗೆಯಲ್ಲಿ ಗ್ರಾಮದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಮಹಾ ಶಿವರಾತ್ರಿ ಆಚರಣೆ ಅಂಗವಾಗಿ ದೇವಾಲಯಲ್ಲಿ ಬೆಳಗ್ಗಿನಿಂದಲೇ ಗಣಪತಿ ಹೋಮ, ಈಶ್ವರನಿಗೆ ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ನಡೆಯಿತು. ದೇವಾಲಯದ ಅರ್ಚಕರಾದ ಕೃಷ್ಣ ಭಟ್ ಮತ್ತು ಮಡಿಕೇರಿಯ ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ಮಹಾಪೂಜೆಯ ನಂತರ ನೆರೆದಿದ್ದ ಸಹಸ್ರಾರು ಭಕ್ತರಿಗೆ ಅನ್ನದಾನ ನೆರವೇರಿತು. ಶಿವರಾತ್ರಿ ಜಾಗರಣೆಯ ಅಂಗವಾಗಿ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪೌರಾಣಿಕ ಯಕ್ಷಗಾನ ನಡೆಯಿತು.