ಇತ್ತೀಚಿನ ಸುದ್ದಿ
ಮೆಡಿಕಲ್ ಕಾಲೇಜು ಡ್ರಗ್ಸ್ ಜಾಲ: ಮತ್ತೆ 3 ಮಂದಿ ಸೆರೆ: ಬಂಧಿತರ ಸಂಖ್ತೆ 13ಕ್ಕೆ ಏರಿಕೆ
12/01/2023, 21:11

ಮಂಗಳೂರು(reporterkarnataka.com): ನಗರದಲ್ಲಿ ಮೆಡಿಕಲ್ ಕಾಲೇಜು ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿ ಗಳ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಮತ್ತೆ 3 ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 13ಕ್ಕೆ ಏರಿದೆ.
ಡ್ರಗ್ಸ್ ಜಾಲದ ಜಾಡು ಹಿಡಿದು ಹೊರಟಿರುವ ಕಮಿಷನರೇಟ್ ವ್ಯಾಪ್ತಿಯ ಪೊಲೀಸರ ತಂಡವು ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಮೂವರನ್ನು ಸೆರೆ ಹಿಡಿದಿದ್ದಾರೆ. ತುಮಕೂರು ಮೂಲದ ಹರ್ಷ ಕುಮಾರ್ ಪೆಥಾಲಜಿ ಎಂಡಿ ವ್ಯಾಸಂಗ ಮಾಡುತ್ತಿದ್ದು, ಡಿ ಫಾರ್ಮಾ ಅಂತಿಮ ವರ್ಷದ ಕೊಚ್ಚಿನ್ ಮೂಲದ ಆಡೋನ್ ದೇವ್ ಮತ್ತು ಮಂಗಳೂರು ಬಂದರಿನಲ್ಲಿ ಹಣ್ಣಿನ ಅಂಗಡಿಯಲ್ಲಿರುವ ಮೊಹಮ್ಮದ್ ಅಫ್ಸರ್ ಎಂಬುವರನ್ನು ಗಾಂಜಾ ಸೇವನೆ ಹಾಗೂ ಮಾರಾಟದ ಆರೋಪದಲ್ಲಿ ಬಂಧನ ಮಾಡಲಾಗಿದೆ.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾರ್ಗದರ್ಶನದಲ್ಲಿ ಬುಧವಾರ ಬಂಟ್ಸ್ ಹಾಸ್ಟೇಲ್ ಬಳಿಯ ಫ್ಲ್ಯಾಟ್ ವೊಂದರಿಂದ ಹೌಸ್ ಸರ್ಜನ್ ಹಾಗೂ ಮೆಡಿಕಲ್ ಆಫೀಸರ್ ಸೇರಿದಂತೆ ಎಂಬಿಬಿಎಸ್ , ಎಂಡಿ ವ್ಯಾಸಂಗ ಮಾಡುವ ಒಟ್ಟು 10 ಮಂದಿಯನ್ನು ಬಂಧನ ಮಾಡಲಾಗಿತ್ತು. ಡ್ರಗ್ಸ್ ಜಾಲದಲ್ಲಿ ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳ ವೈದ್ಯರು ಹಾಗೂ ವಿದ್ಯಾರ್ಥಿಗಳು ಬಂಧನ ಆಗಿರುವುದರಿಂದ ಪೊಲೀಸರು ಕಾರ್ಯಾಚರಣೆ ಮುಂದುವರಿದಿದೆ. ಡ್ರಗ್ಸ್ ಜಾಲದ ಮಾಸ್ಟರ್ ಮೈಂಡ್ ಇಂಗ್ಲೆಂಡ್ ಪ್ರಜೆ ಕಿಶೋರಿ ಲಾಲ್ ನೀಡಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಿಶೋರಿಲಾಲ್ ಮಂಗಳೂರಿನಲ್ಲಿ 15 ವರ್ಷಗಳಿಂದ ವಾಸವಾಗಿದ್ದು, ದಂತ ವೈದ್ಯಕೀಯ ಓದುತ್ತಿದ್ದಾನೆ. ಆದರೆ ಇನ್ನೂ ಕೂಡ ಇತನ ಬಿಡಿಎಸ್ ಓದು ಮುಗಿದಿಲ್ಲ. ಅದರ ಬದಲಾಗಿ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ. ಇತನೇ ಹಲವರಿಗೆ ಗಾಂಜಾ, ಡ್ರಗ್ಸ್ ಅನ್ನು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಗಾಂಜಾ ಸೇವನೆ ಹಾಗೂ ಮಾರಾಟ ದಂಧೆಯಲ್ಲಿ ಇನ್ನಷ್ಟು ಮಂದಿ ಇರುವ ಸಾಧ್ಯತೆ ಇದ್ದು, ತನಿಖೆ ನಡೆಯುತ್ತಿದೆ. ಬುಧವಾರ ಬಂಧನ ಮಾಡಿರುವವರಲ್ಲಿ ನಾಲ್ವರು ಎಂಬಿಬಿಎಸ್ ಓದುವ ವಿದ್ಯಾರ್ಥಿನಿಯರು ಇದ್ದಾರೆ. ಅವರ ಜತೆಗೆ ಎಂಡಿ ಹಾಗೂ ಸರ್ಜನ್ ಗಳು ಸಿಕ್ಕು ಬಿದ್ದಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ