ಇತ್ತೀಚಿನ ಸುದ್ದಿ
ಎಂಸಿಸಿ ಬ್ಯಾಂಕ್: 2024–25 ವಿತ್ತೀಯ ವರ್ಷದಲ್ಲಿ 13 ಕೋಟಿ ಲಾಭ; ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆ ಆರಂಭ
15/04/2025, 19:37

ಮಂಗಳೂರು(reporterkarnataka.com):ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಒಟ್ಟು 13 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ.
ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ 1.30% ಎನ್.ಪಿ.ಎ. ದಾಖಲಿಸಿದೆ.
ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2024–2025ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ವಿತ್ತೀಯ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಮಣ್’ನಲ್ಲಿ ಕ್ರಮವಾಗಿ 18ನೇ ಮತ್ತು 19ನೇ ಶಾಖೆಯನ್ನು ತೆರೆದಿದ್ದು, ಬೈಂದೂರ್‌ನಲ್ಲಿ ಶೀಘ್ರದಲ್ಲೇ ಶಾಖೆಯನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎರಡನೇ ಬ್ಯಾಂಕ್ ಆಗಿರುತ್ತದೆ. ಬ್ಯಾಂಕಿನ ವ್ಯವಹಾರವು ರೂ. 1240 ಕೋಟಿ ತಲುಪಿದ್ದು, ಈ ಆರ್ಥಿಕ ವರ್ಷದ ಇನ್ನೊಂದು ಮಹತ್ವದ ಸಾಧನೆಯಾಗಿರುತ್ತದೆ.
ಕರ್ನಾಟಕ ರಾಜ್ಯದ್ಯಾಂತ ಕಾರ್ಯವ್ಯಾಪ್ತಿ ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಚೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದ್ದು, 2024–25 ವಿತ್ತೀಯ ವರ್ಷದಲ್ಲಿ ದಾಖಲೆಯ ರೂ. 13.00 ಕೋಟಿ ವ್ಯವಹಾರಿಕ ಲಾಭವನ್ನು ಗಳಿಸಿದೆ. 2024–25 ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ (Net Worth) ರೂ. 76.00 ಕೋಟಿಯಿಂದ ರೂ.86.68 ಕೋಟಿಗೆ ತಲುಪಿದೆ. ಬ್ಯಾಂಕಿನ ವ್ಯವಹಾರ ರೂ. 1240 ಕೋಟಿ ದಾಟಿದ್ದು ಕಳೆದ ವರ್ಷಕ್ಕಿಂತ ಶೇಕಡಾ 15 ಏರಿಕೆಯಾಗಿದೆ. ಒಟ್ಟು ಠೇವಣಿಯಲ್ಲಿ ಶೇಕಡಾ 11.00 ಪ್ರಗತಿ ಸಾಧಿಸಿದ್ದು, ರೂ.705.40 ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ 20.37 ಪ್ರಗತಿ ಸಾಧಿಸಿದ್ದು ರೂ.535.49 ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.836.73 ಕೋಟಿ (ಪ್ರಗತಿ ಶೇಕಡಾ 11.13) ಮತ್ತು ಶೇರು ಬಂಡವಾಳ ರೂ.32.43 ಕೋಟಿ (ಪ್ರಗತಿ ಶೇಕಡಾ 3.91) ಆಗಿರುತ್ತದೆ. ಬ್ಯಾಂಕಿನ CRAR (Capital to Risk Assets Ratio) ಪ್ರಮಾಣವು ಶೇಕಡಾ 22.81 ಇದ್ದು ನಿಗದಿತ ಕನಿಷ್ಟ ಪ್ರಮಾಣ ಶೇಕಡಾ 12ಕ್ಕಿಂತ ಜಾಸ್ತಿಯಿರುತ್ತದೆ.
ಬ್ಯಾಂಕಿನ ಕಾರ್ಯವ್ಯಾಪ್ತಿಯು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಂಕಿಂಗ್ ಮುಖಾಂತರ ನಡೆಸುತ್ತಿದ್ದು, ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲೂ ದೊರೆಯುತ್ತವೆ. ಗ್ರಾಹಕರಿಗೆ ಕಡಿಮೆ ಬಾಡಿಗೆಯಲ್ಲಿ ಲಾಕರ್ ಸೌಲಭ್ಯ, ಕಡಿಮೆ ದರದಲ್ಲಿ ದೇಶ ವಿದೇಶ ವಿಧ್ಯಾ ಭವಿಷ್ಯ ಶಿಕ್ಷಣ ಸಾಲ, ಎಮ್.ಎಸ್.ಎಮ್.ಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗ್ರಹ ಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಏಟಿಎಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ (DICGC) ವಿಮಾ ಸೌಲಭ್ಯವಿದೆ.
*ಮುಂದಿನ ಕಾರ್ಯಯೋಜನೆಗಳು:*
1) ಜುಲೈ ಅಂತ್ಯದೊಳಗೆ ಬೈಂದೂರಿನಲ್ಲಿ 20ನೇ ಶಾಖೆ
2) ಜೂನ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಕುಲಶೇಖರ ಶಾಖೆಯ ಸ್ಥಳಾಂತರ
3) ಗೂಗಲ್ ಪೇ, ಫೊನ್ ಪೇ, ಯುಪಿಎ ಸೌಲಭ್ಯಗಳು
4) ಮಾರ್ಚ್ ಅಂತ್ಯದೊಳಗೆ ರೂ. 1500 ಕೋಟಿ ವ್ಯವಹಾರದ ಗುರಿ ಬ್ಯಾಂಕಿನ ಸದಸ್ಯರು ಬ್ಯಾಂಕಿನ ಪ್ರಸಕ್ತ ಆಡಳಿತ ಮಂಡಳಿಗೆ ನೀಡಿದ ಬೆಂಬಲ, ಗ್ರಾಹಕರ ವಿಶ್ವಾಸ ಮತ್ತು ಅಧಿಕಾರಿವರ್ಗ ಹಾಗೂ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ. ಜೊತೆಗೆ ಸಾಕಷ್ಟು ಅನಿವಾಸಿ ಭಾರತೀಯರು ಬ್ಯಾಂಕಿನಲ್ಲಿ ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಿರುತ್ತಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅನಿಲ್ ಲೋಬೊ (ಅಧ್ಯಕ್ಷರು), ಜೆರಾಲ್ಡ್ ಜೂಡ್ ಡಿಸಿಲ್ವ (ಉಪಾಧ್ಯಕ್ಷರು), ನಿರ್ದೇಶಕರಾದ ಆಂಡ್ರ್ಯೂ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜಾ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೊಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.