ಇತ್ತೀಚಿನ ಸುದ್ದಿ
ಮೇ 31ರಿಂದ ಒಂದು ವಾರ ಶಿವಮೊಗ್ಗ ಜಿಲ್ಲೆ ಸಂಪೂರ್ಣ ಲಾಕ್ ಡೌನ್: ಬ್ಯಾಂಕ್, ಸರಕಾರಿ ಕಚೇರಿ ಕೂಡ ಬಂದ್
30/05/2021, 04:35
ಶಿವಮೊಗ್ಗ(reporterkarnataka news) : ಮೇ 31 ರಿಂದ ಜೂನ್ 7 ರವರೆಗೆ ಶಿವಮೊಗ್ಗ ಜಿಲ್ಲಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಈ ಅವಧಿಯಲ್ಲಿ ಹಾಲು ಮತ್ತು ಔಷಧಿ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ತರಕಾರಿ ಖರೀದಿಗೆ ತಳ್ಳುಗಾಡಿಯಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ದಿನಸಿ ಅಂಗಡಿಗಳಿಗೆ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ತರೆಯಬಹುದು. ಲಾಕ್ ಡೌನ್ ಅವಧಿಯಲ್ಲಿ ಬ್ಯಾಂಕ್ ಸೇವೆಗಳು, ಸರಕಾರಿ ಕಚೇರಿ ಸಹ ಸ್ಥಗಿತಗೊಳ್ಳಲಿದೆ. ಅವಶ್ಯಕ ಸರಕಾರಿ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.
ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಕದ್ದುಮುಚ್ಚಿ ಓಡಾಟ ಜಾಸ್ತಿಯಾಗಿದೆ. ಅನಿವಾರ್ಯವಾಗಿ ಕಠಿಣ ಲಾಕ್ ಡೌನ್ ಕೈಗೊಳ್ಳುವಂತಾಗಿದೆ. ಲಾಕ್ ಡೌನ್ ವೇಳೆ ಅನಗತ್ಯವಾಗಿ ಓಡಾಡುವವರ ವಾಹನ ಸಹ ಸೀಜ್ ಮಾಡಲಾಗುತ್ತದೆ. ಜೊತೆಗೆ ವಾಹನ ಚಾಲಕ ಹಾಗೂ ಸವಾರನನ್ನು ಪೊಲೀಸರು ವಶಕ್ಕೆ ಪಡೆಯಲು ಸಚಿವರ ಸೂಚನೆ ನೀಡಲಾಗಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.