ಇತ್ತೀಚಿನ ಸುದ್ದಿ
ಮತ್ತೊಮ್ಮೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬಿಜೆಪಿ: ಪುತ್ತಿಲ ಪರಿವಾರ ರಾಜ್ಯಕ್ಕೆ ವಿಸ್ತರಣೆ?: ಇಕ್ಕಟ್ಟಿನಲ್ಲಿ ಕಮಲ ಪಾಳಯ
28/07/2023, 23:15

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವ ಮೂಲಕ ಪುತ್ತಿಲ ಪರಿವಾರ ರಾಜಕೀಯ ಸ್ವರೂಪವನ್ನು ಪಡೆದಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ದೊರೆತ ಅಭೂತಪೂರ್ವ ಬೆಂಬಲದ ಫಲವಾಗಿ ಪುತ್ತಿಲ ಪರಿವಾರವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಕುರಿತು ಚಿಂತನೆ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯೊಳಗಿನ ಅಸಮಾಧಾನ ಸ್ಪೋಟದ ಫಲವೇ ಈ ಪುತ್ತಿಲ ಪರಿವಾರ. ಆರಂಭದಲ್ಲಿ ಬಿಜೆಪಿ, ಅರುಣ್ ಕುಮಾರ್ ಪುತ್ತಿಲ ಅವರನ್ನು ನಿರ್ಲಕ್ಷ್ಮಿಸಿತ್ತು. ಪುತ್ತಿಲ
ಅವರು ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಮಾಹಿತಿ ಹೊರ ಬಿದ್ದಾಗ ಬಿಜೆಪಿ ಅಷ್ಟೇನು ತಲೆ ಕೆಡಿಸಿಕೊಂಡಿಲ್ಲ. ಇರಲಿ, ಒಂದು 5 ಸಾವಿರ ಓಟು ಪಡೆದಾರು ಎಂದು ನಿರ್ಲಕ್ಷ್ಮಿಸಿತ್ತು. ಇದಕ್ಕೆ ಕಾರಣವೂ ಇತ್ತು. ಈ ಹಿಂದೆ ದ.ಕ. ಜಿಲ್ಲೆಯಲ್ಲಿ ಜನಸಂಘದ ಪಿತಾಮಹಾ ಎಂದೇ ಕರೆಸಿಕೊಳ್ಳುತ್ತಿದ್ದ ಉರಿಮಜಲು ರಾಮ ಭಟ್ ಅವರ ಸ್ವಾಭಿಮಾನಿ ಸಂಘಟನೆಯಿಂದ ಶಕುಂತಳಾ ಶೆಟ್ಟಿ ಅವರು
ಪುತ್ತೂರು ಕ್ಷೇತ್ರದಿಂದ ಕಣಕ್ಕಿಳಿಸಿದಾಗಲೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಕಮಲ ಪಾಳಯದ ಮಲ್ಲಿಕಾ ಪ್ರಸಾದ್ ಅಲ್ಪ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಹಾಗೆಯೇ ಪುತ್ತಿಲ ಅವರು ಸ್ಪರ್ಧಿಸಿದರೂ ಬಿಜೆಪಿ ಅಭ್ಯರ್ಥಿ ಕನಿಷ್ಠ 500 ಮತಗಳಿಗಾದರೂ ಗೆಲುವು ಸಾಧಿಸಬಹುದು ಎಂದು ಬಿಜೆಪಿ ನಾಯಕರು ಲೆಕ್ಕಚಾರ ಹಾಕಿದ್ದರು. ಆದರೆ ಆ ಲೆಕ್ಕಾಚಾರವೆಲ್ಲ ಉಲ್ಟಾ ಆಗಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಕಾಂಗ್ರೆಸ್ ಇಲ್ಲಿ ಅಲ್ಪ ಮತಗಳ ಅಂತರದಲ್ಲಿ ಪುತ್ತಿಲ ವಿರುದ್ಧ ಗೆಲುವು ಸಾಧಿಸಿತ್ತು. ವಾಸ್ತವದಲ್ಲಿ ಸೋತದ್ದು ಪುತ್ತಿಲ ಅಲ್ಲ, ಬದಲಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರಕಾರ ನಡೆಸುತ್ತಿದ್ದ ಬಿಜೆಪಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಪುತ್ತಿಲ ಪರಿವಾರದ ಅದ್ಬುತ ಬೆಳವಣಿಗೆ ಕಂಡು ಬಿಜೆಪಿ ಹೈಕಮಾಂಡೇ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪುತ್ತಿಲ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಪುತ್ತಿಲ ಈ ಆಫರನ್ನು ತಿರಸ್ಕರಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಲೋಕಸಭೆಗೆ ಮಂಗಳೂರಿನಿಂದ ಟಿಕೆಟ್ ಪುತ್ತಿಲ ಅವರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಬಿ.ಎಲ್. ಸಂತೋಷ್ ಅವರಿಗೆ ತನ್ನ ಆಪ್ತನಾದ ಪ್ರಸಕ್ತ ರಾಜ್ಯಾಧ್ಯಕ್ಷ ಹುದ್ದೆಯಲ್ಲಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ತಪ್ಪಿಸುವುದು ಇಷ್ಟವಿಲ್ಲ. ಈ ಕಾರಣದಿಂದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಇಲ್ಲಿಗೆ ಸಂಧಾನದ ಬಾಗಿಲು ಮುಚ್ಚಿಕೊಂಡಿದೆ ಎಂದು ಅರ್ಥ ವಲ್ಲ. ಮತ್ತೆ ಬಿಜೆಪಿ ಹೈಕಮಾಂಡ್ ಪುತ್ತಿಲ ಅವರನ್ನು ಎರಡನೇ ಸುತ್ತಿನ ಮಾತುಕತೆಗೆ ಕರೆಯ ಬಹುದು. ಇವೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿರುವ ಪುತ್ತಿಲ ಪರಿವಾರವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಚಿಂತನೆ ಪರಿವಾರದೊಳಗೆ ಮೂಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಮೂರನೇ ಸ್ಥಾನಕ್ಕೆ ತಳ್ಳಿದ ಬಳಿಕ ಈ ಚಿಂತನೆ ಮೂಡಿದೆ. ಒಟ್ಟಿನಲ್ಲಿ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿದೆ. ಪುತ್ತಿಲ ಅವರ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ, ಪರಿಗಣಿಸುವಂತೆಯೂ ಇಲ್ಲ ಎಂಬ ಇಕ್ಕಟ್ಟಿಗೆ ಬಿಜೆಪಿ ಸಿಲುಕಿದೆ. ಪುತ್ತಿಲ ಅವರನ್ನು ನಿರ್ಲಕ್ಷಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಂದ ಫಲಿತಾಂಶ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಮರುಕಳಿಸಲಿದೆ ಎನ್ನುವುದು ಕೂಡ ಬಿಜೆಪಿ ಹೈಕಮಾಂಡಿಗೆ ಸ್ಪಷ್ಟವಾಗಿ ತಿಳಿದಿದೆ.