ಇತ್ತೀಚಿನ ಸುದ್ದಿ
ಮರಳು ಮಾಫಿಯಾಕ್ಕೆ ಸಾಥ್, ಮೇಲಾಧಿಕಾರಿ ಜತೆ ಕಿರಿಕ್ ಆರೋಪ: ಕಂಕನಾಡಿ ನಗರ ಠಾಣೆ ಇನ್ಸ್ಪೆಕ್ಟರ್ ಭಜಂತ್ರಿ ಅಮಾನತು
18/01/2024, 15:55
ಮಂಗಳೂರು(reporterkarnataka.com): ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿದೆ.
ಮರಳು ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ ಮತ್ತು ಮೇಲಧಿಕಾರಿಗಳ ಜೊತೆಗೆ ಉಡಾಫೆಯಾಗಿ ವರ್ತಿಸಿದ್ದಾರೆಂದು ಆರೋಪದ ಮೇಲೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅಮಾನತು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ತಲಪಾಡಿ ಗ್ರಾಪಂ ಸದಸ್ಯ ಹಾಗೂ ಇನ್ನಿತರರಿಗೆ ಸೇರಿದ್ದೆನ್ನಲಾದ 8 ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದರು. ಮರಳು ಮತ್ತು ಟಿಪ್ಪರ್ ವಾಹನಗಳನ್ನು ಮುಂದಿನ ತನಿಖೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದ್ದರು. ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕ ಮರಳುಗಾರಿಕೆ ನಡೆಯುತ್ತಿದ್ದರಿಂದ ಎಸಿಪಿ ಧನ್ಯಾ ನಾಯಕ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರೂ,ಇನ್ಸ್ ಪೆಕ್ಟರ್ ಭಜಂತ್ರಿ ನಿರ್ಲಕ್ಷ್ಯ ವಹಿಸಿದ್ದರು. ಈ ವೇಳೆ, ಭಜಂತ್ರಿಯವರು ತನ್ನ ಮೇಲಧಿಕಾರಿ ಎಸಿಪಿ ಜೊತೆಗೆ ಉಡಾಫೆಯಿಂದ ಮಾತನಾಡಿದ್ದರು ಎನ್ನಲಾಗಿದೆ.