ಇತ್ತೀಚಿನ ಸುದ್ದಿ
ಮಣ್ಣಿನಲ್ಲಿ ಜೀವಾಣುಗಳು ಹುಟ್ಟುದಿದ್ದರೆ ಕೃಷಿ ಉಳಿಯಲು ಸಾಧ್ಯವಿಲ್ಲ: ಚಂದ್ರಶೇಖರ ನಾರಾಣಾಪುರ ಅಭಿಮತ
10/01/2023, 21:54
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದೇಸಿ ಗೋತಳಿಯ ಸಗಣಿ ಬಳಸಿ ಮಣ್ಣಿನಲ್ಲಿ ಜೀವಾಣುಗಳನ್ನು ಸೃಷ್ಟಿಸಿ, ತೋಟದಲ್ಲಿಕಳೆ ಬೆಳೆಯಲು ಬಿಟ್ಟು ಸಮರ್ಥ ನಿರ್ವಹಣೆ ಮಾಡಿ. ಎರೆಹುಳು ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿ ನಿಮ್ಮ ತೋಟ, ಗದ್ದೆ, ಹೊಲವನ್ನು ಶ್ರೀಮಂತವಾಗಿಸಿ.ಇದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಣಾಪುರ ಅವರ ಕಿವಿಮಾತು.
ಮೂಡಿಗೆರೆ ತಾಲೂಕು ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತಿಬೈಲು ಗ್ರಾಮದ ಮಲ್ಲಿಗೆ ಭವನದಲ್ಲಿ ಮಂಗಳವಾರ ವಿಜಯ ಕರ್ನಾಟಕ ಆಯೋಜಿಸಿದ್ದ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಲಾಭದಾಯಕ ಕೃಷಿ ಉಪನ್ಯಾಸ ಮತ್ತು ಸಂವಾದದಲ್ಲಿ ಮಾತನಾಡಿದರು.
ಅತಿಯಾದ ರಾಸಾಯನಿಕಗಳ ಬಳಕೆಯಿಂದ ಜೀವಾಣುಗಳು ಮೃತಪಟ್ಟು ಮಣ್ಣು ಬರಡಾಗಿ ಹೋಗಿದೆ. ಮಣ್ಣಿನ ಆರೋಗ್ಯ ಕಾಪಾಡಲು ಬೇಕಾದ ಜೀವಾಣುಗಳಿಲ್ಲದೆ ಬೆಳೆಗಳಿಗೆ ಹೊಸ ಕಾಯಿಲೆಗಳು ಅಮರಿಕೊಳ್ಳುತ್ತಿವೆ. ಮಣ್ಣಿನಲ್ಲಿ ಜೀವಾಣುಗಳು ಹುಟ್ಟುವಂತೆ ಮಾಡದ ಹೊರತು ಕೃಷಿ ಮತ್ತು ರೈತರು ಉಳಿಯಲು ಸಾಧ್ಯವಿಲ್ಲ. ಒಂದು ಮಲೆನಾಡು ಗಿಡ್ಡಗೋತಳಿಯ ಆಕಳ ಮೂತ್ರ ಮತ್ತು ಸಗಣಿಯು ಮೂವತ್ತು ಎಕರೆ ಭೂಮಿಗೆ ಶಕ್ತಿ ನೀಡುತ್ತದೆ. ಅದಕ್ಕಾಗಿ ದೇಸಿಗೋವುಗಳನ್ನು ಸಾಕಬೇಕು ಎಂದರು.
ನಮ್ಮ ಪರಿಸರಕ್ಕೆ ಪೂರಕವಾದ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ವಿದೇಶಿಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹಸಿರು ಕ್ರಾಂತಿ ಹೆಸರಲ್ಲಿರಾಸಾಯನಿಕಗಳನ್ನು ಮನಬಂದಂತೆ ಬಳಸಿ ಭೂಮಿಯ ಶಕ್ತಿ ಹೀನವಾದರೆ, ಕ್ಷೀರಕ್ರಾಂತಿಯಲ್ಲಿ ನಮ್ಮ ದೇಸಿ ಗೋವುತಳಿಗಳನ್ನೇ ಸರ್ವನಾಶ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಧಕ ರೈತರಿಗೆ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡ ರೈತರನ್ನು ಭೂಗಳ್ಳರೆಂಬ ಪಟ್ಟಕಟ್ಟುತ್ತಿದ್ದ ಕಾಯಿದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದಿದೆ. ಯಾವುದೇ ರೈತರ ಮೇಲೆ ಮೊಕದ್ದಮೆ ದಾಖಲಿಸದಂತೆ ಸರಕಾರ ಕ್ರಮಕೈಗೊಂಡಿದೆ. ೨೦ ವರ್ಷಕ್ಕೂ ಹಿಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡ ರೈತರಿಗೆ ಎಕರೆಗೆ ೨ ಸಾವಿರದಂತೆ ೩೦ ವರ್ಷಕ್ಕೆ ಲೀಸ್ಗೆ ನೀಡುವ ಹೊಸ ಕಾಯಿದೆಯನ್ನು ಜಾರಿಗೊಳಿಸುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಅತಿವೃಷ್ಠಿ, ಅನಾವೃಷ್ಠಿ, ಫಲವತ್ತತೆ ಕಳೆದುಕೊಳ್ಳುತ್ತಿರುವ ಮಣ್ಣು ಮತ್ತು ಹವಾಮಾನ ವೈಪರಿತ್ಯಗಳ ನಡುವೆ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೆಳೆಗಳ ಉತ್ಪಾದನೆ ಹೆಚ್ಚಳ ಮಾಡಬೇಕಾದ ದೊಡ್ಡಸವಾಲು ದೇಶದ ರೈತರ ಮುಂದಿದೆ. ಹೀಗಾಗಿ ರೈತರು ಸಮಗ್ರಕೃಷಿ ಪದ್ಧತಿ, ಹೊಸತನವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ದೇಶದ ಆಹಾರದ ಕೊರತೆಯನ್ನು ನೀಗಿಸುವುದರ ಜತೆಗೆ ರೈತನ ಆದಾಯವನ್ನು ವೃದ್ಧಿಸುತ್ತದೆ ಎಂದರು.
ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ನಾರಾಯಣ ಎಸ್.ಮಾವರ್ಕರ್ ಮಾತನಾಡಿ, ಗಡಿಯಲ್ಲಿ ಯೋಧರು ಹಗಲು ರಾತ್ರಿ ದೇಶ ರಕ್ಷಣೆ ಮಾಡಿದರೆ, ನಾಡಿನೊಳಗೆರೈತರು ಆಹಾರ ಉತ್ಪನ್ನಗಳನ್ನು ಬೆಳೆದು ದೇಶದ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರ್ಖಾನೆಗಳು ನಿಲ್ಲಬಹುದು. ಆದರೆ, ರೈತನ ಕೃಷಿ ಕಾರ್ಖಾನೆಯು ಯಾವುದೇ ವಿಪತ್ತು ಸಂಭವಿಸಿದರೂ ಬಂದ್ ಅಗುವುದಿಲ್ಲ. ಅಂತಹರೈತರನ್ನು ಗುರುತಿಸಿ ಪ್ರಶಸ್ತಿ ನೀಡುವ ಪವಿತ್ರವಾದಕಾರ್ಯವನ್ನು ವಿಜಯ ಕರ್ನಾಟಕ ಮಾಡುತ್ತಿದೆ ಎಂದರು.
ಆರೋಗ್ಯತಪಾಸಣೆ ಶಿಬಿರ: ಕಾರ್ಯಕ್ರಮ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ ಕಣ್ಣಿನ ಪರೀಕ್ಷೆ ಮಾಡಿ ಹಲವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯಿಂದ ರೈತರಿಗೆ ಉಚಿತವಾಗಿ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.
ಆರೋಗ್ಯಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವಸ್ತುಪ್ರದರ್ಶನ ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಎಚ್.ಎಸ್.ಶಿವಕುಮಾರ್, ನಂದೀಶ್ ಬಂಕೇನಹಳ್ಳಿ, ಸುದೀಶ್ ಕಳಸ ಅವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಬಕ್ಕಿ ಮಂಜುನಾಥ್ ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು. ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ನಾರಾಯಣ ಎಸ್.ಮಾವರ್ಕರ್ ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸುವ ಮೂಲಕ ವಸ್ತುಪ್ರದರ್ಶನಕ್ಕೆಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಮುನ್ನ ಕಸ್ತೂರಿ ಬಾ ರಾಷ್ಟಿಯ ಸ್ಮಾರಕ ಟ್ರಸ್ಟ್ನ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರಿಬಾ ಪುತ್ಥಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮತ್ತು ಅತಿಥಿಗಳು ಮಾಲಾರ್ಪಣೆ ಮಾಡಿದರು. ಬಳಿಕ ಅತಿಥಿಗಳನ್ನು ಭಾರತಿಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಕೂಲ್ ಬ್ಯಾಂಡ್ನೊಂದಿಗೆ ಸಭಾಂಗಣಕ್ಕೆಕರೆ ತರಲಾಯಿತು.
ಜಿಲ್ಲಾ ಉಪ ಕೃಷಿ ನಿರ್ದೇಶಕ ಮುನೇಗೌಡ, ಗ್ರಾಮಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಸುನೀತಾ, ಕಾಫಿ ಬೆಳೆಗಾರರಾದ ನಾರ್ಬರ್ಟ್ ಸಾಲ್ಡಾನ, ಸಾವಿತ್ರಮ್ಮ ಮಂಜುನಾಥ್, ಎಚ್.ಎನ್.ಶರತ್ ಇದ್ದರು. ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಆರಗ ರವಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ವರದಿಗಾರ ಚೇತನ್ ಬೇಲೇನಹಳ್ಳಿ ಸ್ವಾಗತಿಸಿ, ಕಾಫಿ ಬೆಳೆಗಾರರವಿಶಂಕರ್ ವಂದಿಸಿದರು.