ಇತ್ತೀಚಿನ ಸುದ್ದಿ
ಮಣಿಪುರ ಮಹಿಳಾ ದೌರ್ಜನ್ಯ ಭಾರತೀಯರೇ ತಲೆತಗ್ಗಿಸುವಂತ ಘಟನೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.
23/07/2023, 22:33
ಮಂಗಳೂರು(reporterkarnataka.com):ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿ ಬಳಿಕ ಸಾಮೂಹಿಕವಾಗಿ ಅಮಾನವೀಯವಾಗಿ ಅತ್ಯಾಚಾರ ಎಸಗಿರವುದು ಇಡೀ ಭಾರತೀಯರನ್ನೇ ತಲೆತಗ್ಗಿಸುವಂತೆ ಮಾಡಿದೆ.
ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದರು.
ಮಹಿಳೆಯರನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಆದರೆ ಇಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರವ ಹೇಯ ದೌರ್ಜನ್ಯ ನಾಗರಿಕ ಸಮಾಜವನ್ನೇ ಪ್ರಶ್ನಿಸುವಂತೆ ಮಾಡಿದೆ.
ಜನಾಂಗೀಯ ಗಲಭೆ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಸಂಪೂರ್ಣ ವಿಲವಾಗಿದೆ. ಕಾನೂನು ಸುವ್ಯವಸ್ಥೆಯ ಅಂಕೆ ಮೀರಿ ಸಾವುನೋವುಗಳು ಸಂಭವಿಸುತ್ತಿವೆ. ಮಹಿಳೆಯರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಮಣಿಪುರದಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಲ್ಲಿನ ಪೈಶಾಚಿಕ ಕೃತ್ಯದಿಂದ ಮಣಿಪುರ ಸರ್ಕಾರದ್ದು ಮಾತ್ರವಲ್ಲ, ದೇಶದ ಮರ್ಯಾದೆಯೇ ಹೋಗಿದೆ. ಇದು ಮಹಿಳಾ ಸಮಾಜದ ಮೇಲಿನ ಪ್ರಹಾರ. ಕೃತ್ಯ ನಡೆದು ಎರಡು ವಾರವಾದರೂ ಪ್ರಧಾನಿ, ಕೇಂದ್ರ ಗೃಹ ಸಚಿವರ ಸಹಿತ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾದ ನಂತರವಷ್ಟೇ ಪ್ರಧಾನಿ ಪ್ರತಿಕ್ರಿಯಿಸಿರವುದು ದುರದೃಷ್ಟಕರ. ವಿದೇಶದಲ್ಲಿ ನಮ್ಮ ಪ್ರಧಾನಿಯವರು ಮಹಿಳೆಯರ ರಕ್ಷಣೆಯ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಬಗ್ಗೆ ಹೇಳಿಕೆ ಬಿಟ್ಟರೆ ಏನು ಕ್ರಮ ಕೈಗೊಂಡಿದ್ದಾರೆ? ಸರ್ಕಾರದ ಮೌನ ಲಜ್ಜೆಗೇಡಿತನ ಹಾಗು ಅಲ್ಲಿ ಆಡಳಿತ ವ್ಯವಸ್ಥೆ ಇದೆಯೋ, ಇಲ್ಲವೋ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇದು ಕೇವಲ ಅವರ ನೋವಲ್ಲ, ನಮ್ಮ ನೋವೂ ಆಗಿದೆ. ಹಾಗಾಗಿ ದೌರ್ಜನ್ಯಕ್ಕೀಡಾದ ಮಹಿಳೆಯರ ಪರ ನಾವೆಲ್ಲ ನಿಲ್ಲಬೇಕಿದೆ ಎಂದು ಪದ್ಮರಾಜ್ ಒತ್ತಾಯಿಸಿದ್ದಾರೆ.