ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರಪಾಲಿಕೆ ಸಾಮಾನ್ಯ ಸಭೆ: ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ನೂತನ ಟೆಂಡರ್ ರದ್ದುಗೊಳಿಸಲು ನಿರ್ಣಯ
26/09/2023, 22:15
ಮಂಗಳೂರು(reporterkarnataka.com):ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ನೂತನ ಟೆಂಡರ್ ರದ್ದುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಹೊಸ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ವಿಶೇಷ ಸಭೆಯಲ್ಲಿ ಅದನ್ನು ಮಂಡಿಸಿ ಮಂಜೂರಾತಿ ಪಡೆಯಲು ಈ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.
ಕಾಂಗ್ರೆಸ್ ಸದಸ್ಯ ವಿನಯರಾಜ್ ಅವರು ಮಾತನಾಡಿ, ಈಗಾಗಲೇ ೧೭.೨೫ ಕೋಟಿ ರೂ. ವೆಚ್ಚದಲ್ಲಿ ಕರೆಯಲಾಗಿರುವ ಟೆಂಡರ್‌ನಲ್ಲಿ ಯಾಂತ್ರಿಕ ರಸ್ತೆ ಸ್ವಚ್ಛತೆ, ಗಿಡಗಂಟಿಗಳ ಕಟ್ಟಿಂಗ್, ಸುರಕ್ಷತಾ ಯಂತ್ರಗಳನ್ನು ಸೇರಿಸಿಲ್ಲ ಎಂದರು.
ಪ್ರತಿಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಅನಿಲ್ ಕುಮಾರ್, ಶಶಿಧರ ಹೆಗ್ಡೆ,
ಸಚೇತಕ ಪ್ರೇಮಾನಂದ ಶೆಟ್ಟಿ ಸೇರಿದಂತೆ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದರು.
೧೧೨ ಸಿಯಡಿ ಡೋರ್ ನಂಬರ್‌ಗೆ ಸಂಬಂಧಿಸಿದ ಕಡತ ತೆರಿಗೆ ಹಣಕಾಸು ಸ್ಥಾಯಿ ಸಮಿತಿಗೆ ಮಂಡಿಸಿ ಅಧ್ಯಕ್ಷರು, ಸದಸ್ಯರು ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಡೋರ್‌ನಂಬರ್ ಒದಗಿಸಬೇಕು ಎಂದು ಮೇಯರ್ ಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಿರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಸಹಾಯಕ ಆಯುಕ್ತರ ನೇತೃತ್ವದ ಸಮಿತಿ ಮೂಲಕ ಅಣೆಕಟ್ಟುಗಳ ನೀರಿನ ಮಟ್ಟದ ಮೇಲೆ ನಿಗಾ ಇರಿಸಿ ೧೫ ದಿನಗಳಿಗೊಮ್ಮೆ ಪರಿಶೀಲನೆ ನಡೆಸಲು ಸೂಚಿಸಿದ್ದಾರೆ ಎಂದು ಪಾಲಿಕೆ ಆಯುಕ್ತ ಆನಂದ್ ತಿಳಿಸಿದರು.
ನಗರದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕ ಸೃಷ್ಟಿಸುತ್ತಿದೆ ಎಂದು ಶಶಿಧರ ಹೆಗ್ಡೆ ಸಭೆಯಲ್ಲಿ ಪ್ರಸ್ತಾಪಿಸಿದರು. ವೈದ್ಯಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ೧೩೯ ಪ್ರಕರಣಗಳು ಕಂಡು ಬಂದಿವೆ. ಉಳಿದಂತೆ ಮನಪಾ ವ್ಯಾಪ್ತಿಯಲ್ಲಿ ೬೪೫ ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಬಂದರು, ಜಪ್ಪು, ಲೇಡಿಹಿಲ್, ಕಸಬಾ ಬೆಂಗ್ರೆ, ಎಕ್ಕೂರು ಪ್ರದೇಶಗಳಲ್ಲಿ ಹೆಚ್ಚಿವೆ ಎಂದರು.
ವಾಮಂಜೂರಿನ ವೈಟ್‌ಗ್ರೋವ್ ಸಂಸ್ಥೆ ಕಾರ್ಯಾಚರಣೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ನೀಡಿರುವ ನಿಯಮಗಳು ಕಾರ್ಯಗತ ಆಗುತ್ತಿರುವ ಬಗ್ಗೆ ನಗರ ಪಾಲಿಕೆಯ ಸ್ಥಳೀಯ ಸದಸ್ಯರು, ವಿಪಕ್ಷ ನಾಯಕರು ಹಾಗೂ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿ ಸರಕಾರೇತರ ಸಂಸ್ಥೆಯ ತಜ್ಞರ ಸಮಿತಿ ರಚಿಸಿ, ಪರಿಶೀಲನೆ ನಡೆಸಬೇಕು. ಸಮಿತಿ ವರದಿ ಆಧಾರದಲ್ಲಿ ಪರಿಷತ್ತಿನಲ್ಲಿ ಸೂಕ್ತ ನಿಧಾರ ಕೈಗೊಳ್ಳುವುದಾಗಿ ಹೇಳಿದರು.
ಮನಪಾ ಸಾಮಾನ್ಯ ಸಭೆಯ ಆರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಭಗವಹಿಸಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಿ. ೨೦, ಮಹಿಳಾ ಮೀಸಲಾತಿ ಮತ್ತು ಚಂದ್ರಯಾನ ೩ ಯಶಸ್ಸು ಕಂಡಿದೆ ಎಂದು ಅಭಿನಂದನೆ ಸಲ್ಲಿಸಿದರು.
ಸುರತ್ಕಲ್ ಜಂಕ್ಷನ್‌ಗೆ ಸಾವರ್ಕರ್ ವೃತ್ತ ನಾಮಕರಕ್ಕೆ ೧೪ ಆಕ್ಷೇಪಗಳು ಬಂದಿರುವುದರಿಂದ ಹಾಗೂ ಆಕ್ಷೇಪಣೆಯಲ್ಲಿ ವ್ಯಕ್ತವಾಗಿರುವಂತೆ ಸ್ಥಳೀಯ ಸಾಧಕರಾದ ಸುಬ್ಬಯ್ಯ ಶೆಟ್ಟಿ ಅಥವಾ ಶ್ರೀನಿವಾಸ ಮಲ್ಯ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹ ವ್ಯಕ್ತವಾಯಿತು. ಈಗಾಗಲೇ ಸ್ಥಾಯಿ ಸಮಿತಿಯಲ್ಲಿ ಚರ್ಚೆ ಆಗಿರುವ ಕಾರಣ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸುವುದು ಸೂಕ್ತ ಎಂದು ಮೇಯರ್ ಹಾಗೂ ಮುಖ್ಯ ಸಚೇತಕರು ಸಭೆಯಲ್ಲಿ ತಿಳಿಸಿದಾಗ ವಿಪಕ್ಷ ಸದಸ್ಯರು ಆಕ್ಷೇಪ ದಾಖಲಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಉಪ ಮೇಯರ್ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಲೋಹಿತ್ ಅಮೀನ್, ಗಣೇಶ್ ಕುಮಾರ್, ಭರತ್ ಕುಮಾರ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ಉಪಸ್ಥಿತರಿದ್ದರು.