ಇತ್ತೀಚಿನ ಸುದ್ದಿ
ಮಂಗಳೂರು ಉತ್ತರ ಕ್ಷೇತ್ರದಲ್ಲಿ 6500ಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ವಿತರಣೆ: ಶಾಸಕ ಡಾ. ಭರತ್ ಶೆಟ್ಟಿ ಸಾಧನೆ
24/03/2023, 10:18
ಮಂಗಳೂರು(reporterkarnataka.com): ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ 6500ಕ್ಕೂ ಹೆಚ್ಚು ಹಕ್ಕುಪತ್ರ ನೀಡಲಾಗಿದೆ. ಇತರ ಯಾವುದೇ ಅಭಿವೃದ್ಧಿ ಕಾರ್ಯದ ಶಿಲಾನ್ಯಾಸ ಅಥವಾ ಉದ್ಘಾಟನೆ ಮಾಡುವುದಕ್ಕಿಂತ ಹೆಚ್ಚಿನ ಸಂತೃಪ್ತಿ, ಹಕ್ಕುಪತ್ರ ಸ್ವೀಕರಿಸುವಾಗ ಜನರ ಮುಖದಲ್ಲಿ ಕಾಣುತ್ತೇವೆ. ಜನಹಿತಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದಲ್ಲಿ ಯಾವುದೇ ಕೆಲಸ ಕಷ್ಟಕರವಾಗದು. ಇಲ್ಲವಾದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಮತೋಲನ ಸಿಗದು ಎಂದು ಶಾಸಕರ ಡಾ. ಭರತ್ ಶೆಟ್ಟಿ ಹೇಳಿದರು.
ಕಂದಾವರ ಪಂಚಾಯತ್ ವ್ಯಾಪ್ತಿಯ ಕೌಡೂರಿನಲ್ಲಿ ಆಯೋಜಿಸಲಾದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಕಂದಾವರ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಕೌಡೂರಿನಲ್ಲಿ ನಿವೇಶನ 


ಹಸ್ತಾಂತರದ ಜೊತೆಗೆ 170 ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಮಾತನಾಡಿ, ಈಗ ಗುರುತಿಸಲಾದ ನಿವೇಶನದಲ್ಲಿ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ನಿಮ್ಮ ಆಶೀರ್ವಾದವಿದ್ದಲ್ಲಿ ಖಂಡಿತವಾಗಿಯೂ ಮುಂದಿನ ಅವಧಿಗೆ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ ಎಂದರು.
ಶಾಸಕರು ಹಕ್ಕುಪತ್ರದ ಮೂಲಪ್ರತಿ ವಿತರಿಸಿದರು. ಪಂಚಾಯತ್ ಅಧ್ಯಕ್ಷ ಉಮೇಶ, ಪಿಡಿಒ ಸೌಮ್ಯ ಹಾಗೂ ಗುರುಪುರ ನಾಡಕಚೇರಿಯ ಉಪತಹಶೀಲ್ದಾರ್ ಶಿವಪ್ರಸಾದ್ ಉಪಸ್ಥಿತರಿದ್ದರು.














