ಇತ್ತೀಚಿನ ಸುದ್ದಿ
ಮಂಗಳೂರು- ಉಡುಪಿ ಜಿಲ್ಲೆಗಳಲ್ಲಿ ಜನವರಿ 17-23 ಕರ್ನಾಟಕ ಕ್ರೀಡಾಕೂಟ-2025: ವ್ಯವಸ್ಥಿತವಾಗಿ ನಡೆಸಲು ಸಿಎಂ ಸೂಚನೆ
23/12/2024, 21:37
ಬೆಂಗಳೂರು(reporterkarnataka.com): ಕರ್ನಾಟಕ ಕ್ರೀಡಾಕೂಟ-2025 ಅನ್ನು ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸುತ್ತಿದ್ದು ವ್ಯವಸ್ಥಿತ ಏರ್ಪಾಡುಗಳನ್ನು ಮಾಡಲು ಮಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕರ್ನಾಟಕ ಕ್ರೀಡಾಕೂಟ -2025ವನ್ನು lಜನವರಿ 17ರಿಂದ 23ರವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಜನವರಿ 17ರಂದು ಮಂಗಳೂರಿನಲ್ಲಿ ನಡೆಯಲಿದ್ದು,ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಉಡುಪಿ ಜಿಲ್ಲೆಯಲ್ಲಿ ನಡೆಯಲಿದ್ದು ಗೃಹ ಸಚಿವರು ಭಾಗಿಯಾಗಲಿದ್ದಾರೆ.
ಸುಮಾರು 25 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
ಕ್ರೀಡಾಕೂಟದಲ್ಲಿ 3750 ಕ್ರೀಡಾಪಟುಗಳು ಹಾಗೂ 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರು ಸೇರಿದಂತೆ ಅಂದಾಜು 4500 ಜನರು ಭಾಗವಹಿಸಲಿದ್ದು ಊಟ -ತಿಂಡಿ,ವಸತಿ , ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರಿನಲ್ಲಿ 12 ಕ್ರೀಡೆಗಳು ಹಾಗೂ ಉಡುಪಿ ಮತ್ತು ಮಣಿಪಾಲಗಳಲ್ಲಿ 11 ಕ್ರೀಡೆಗಳು ಆಯೋಜನೆಗೊಳ್ಳಲಿದ್ದು, ಶೂಟಿಂಗ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.
*ಕ್ರೀಡಾಕೂಟ ಲಾಂಛನ ಬಿಡುಗಡೆ:* ಕರ್ನಾಟಕ ಕ್ರೀಡಾಕೂಟ-2025ರ ಲಾಂಛನ ಬಿಡುಗಡೆಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೆರವೇರಿಸಿದರು.
ಕ್ರೀಡಾಕೂಟದ ಲೋಗೋದಲ್ಲಿನ ಯಕ್ಷಗಾನ ಕಿರೀಟವು ಕ್ರೀಡಾಕೂಟ ನಡೆಯುವ ಕರಾವಳಿ ಭಾಗದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು,
ತಿಳಿನೀಲಿ ಬಣ್ಣವು ಕಡಲಿನ ಅಗಾಧತೆಯನ್ನು ಜತೆಗೆ ಸೋಲು- ಗೆಲುವು ಗಳಲ್ಲಿ ಕ್ರೀಡಾಪಟುಗಳ ಶಾಂತತೆ ಮತ್ತು ಶ್ರಮವನ್ನು ಪ್ರತಿನಿಧಿಸುವುದಾಗಿ ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಗೃಹ ಸಚಿವರಾದ ಡಾ. ಪರಮೇಶ್ವರ್, ಇಂಧನ ಸಚಿವರಾದ ಕೆ. ಜೆ. ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು , ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಕೆ. ಗೋವಿಂದರಾಜು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.