ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರ ಪಾಲಿಕೆಯನ್ನು ಪೇಪರ್ ಲೆಸ್ ಜತೆ ಕರಪ್ಶನ್ ಲೆಸ್ ಮಾಡಿ: ಆಯುಕ್ತರಿಗೆ ಉಸ್ತುವಾರಿ ಸಚಿವರ ಸಲಹೆ
13/06/2022, 22:55
ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆಯ ಆಡಳಿತವನ್ನು ಪೇಪರ್ ಲೆಸ್ (ಕಾಗದರಹಿತ) ಜತೆಗೆ ಕರಪ್ಶನ್ ಲೆಸ್ (ಭ್ರಷ್ಟಾಚಾರರಹಿತ) ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪಾಲಿಕೆ ಕಮಿಷನರ್ ಗೆ ಕಿವಿಮಾತು ಹೇಳಿದರು.
ಅವರು ಸೋಮವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತ ಸುಧಾರಣೆ ಬಗ್ಗೆ ಮಾತನಾಡಿದ ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಅವರು ಪಾಲಿಕೆ ಆಡಳಿತವನ್ನು ಪೇಪರ್ ಲೆಸ್ ಮಾಡುವ ಕುರಿತು ಉಸ್ತುವಾರಿ ಸಚಿವರ ಗಮನಕ್ಕೆ ತಂದಾಗ, ಕರಪ್ಶನ್ ಲೆಸ್ ಮಾಡಲು ಸಾಧ್ಯವೇ ಎಂದು ಉಸ್ತುವಾರಿ ಸಚಿವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಮಿಷನರ್, ಪಾಲಿಕೆ ಕಚೇರಿಗೆ ಜನರು ಬರುವುದನ್ನು ಕಡಿಮೆ ಮಾಡಲು ಪೇಪರ್ ಲೆಸ್ ಮಾಡಿರುವುದು. ಸಾರ್ವಜನಿಕರು ಬರುವುದು ಕಡಿಮೆಯಾದಾಗ ಕರಪ್ಶನ್ ಕಡಿಮೆಯಾಗುತ್ತದೆ ಎಂದು ಸಮಜಾಸಿಕೆ ನೀಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳ ಸಮರ್ಪಕ ಅನುಷ್ಠಾನ ಹಾಗೂ ಅವುಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ತುರ್ತಾಗಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 24/7 ಕುಡಿಯುವ ನೀರು ಪೂರೈಕೆ, ಗೇಲ್ ಇಂಡಿಯಾದ ಪೈಪ್‍ಲೈನ್ ಅಳವಡಿಕೆ, ಯುಜಿಡಿ ಹಾಗೂ ಮೆಸ್ಕಾಂನಿಂದ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ, ಅದಕ್ಕಾಗಿ ಹೆಚ್ಚಿನ ಅನುದಾನ ಬಿಡುಗಡೆಗೊಂಡಿರುತ್ತದೆ, ಕಾಮಗಾರಿಗಳನ್ನು ನಿರ್ವಹಿಸುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು, ಈ ಕಾಮಗಾರಿಗಳಿಗೆ ಮತ್ತಷ್ಟು ವೇಗ ತುಂಬಲು ಹಾಗೂ ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ತುರ್ತಾಗಿ ಸಭೆ ನಡೆಸಿ ಚರ್ಚಿಸುವಂತೆ ಉಸ್ತುವಾರಿ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಈ ಕಾಮಗಾರಿಗಳ ನಿರ್ವಹಣೆಯಲ್ಲಿ ಸೂಕ್ತ ಮೇಲುಸ್ತುವಾರಿ ಆಗಬೇಕು ಎಂದು ಒತ್ತಿ ಹೇಳಿದ ಅವರು, ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು, ಮಹಾನಗರ ಪಾಲಿಕೆ ಸದಸ್ಯರ ಸಲಹೆ ಹಾಗೂ ಸೂಚನೆಗಳನ್ನು ಗಮನಕ್ಕೆ ತೆಗೆದುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು, ಮಹತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಳ್ಳಲಾದ 19 ಕಾಮಗಾರಿಗಳು ಗೇಲ್ ಕಾಮಗಾರಿಗಳೊಂದಿಗೆ ತಾಳೆಯಾಗಬೇಕು, ಈ ದಿಸೆಯಲ್ಲಿ ಎಂಜಿನಿಯರುಗಳು ಮೇಲುಸ್ತುವಾರಿ ಮಾಡಬೇಕು, ನಗರದಲ್ಲಿ ಸ್ಪಚ್ಚತೆಗೆ ಹೆಚ್ಚಿನ ಗಮನ ಹರಿಸಬೇಕು, ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಬಾರದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ತಿಳಿಸಿದರು.
ಕಂದಾಯ ವಸೂಲಾತಿಗೆ ಮಹಾನಗರ ಪಾಲಿಕೆಯಿಂದ ಮತ್ತಷ್ಟು ಹೆಚ್ಚು ಗಮನ ಹರಿಸಬೇಕು, ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸಬೇಕು, ಅವರಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕು ಎಂದು ಸಚಿವರು, ಸಣ್ಣ ಸಣ್ಣ ವಿಷಯಗಳು ಸಭೆಯಲ್ಲಿ ಚರ್ಚೆಯಾಗಬಾರದು, ಗೇಲ್ ಇಂಡಿಯಾ ಹಾಗೂ ಯುಜಿಡಿ ಕಾಮಗಾರಿಗಳು ನಡೆಯುತ್ತಿರುವ ಸ್ಥಳವನ್ನು ಪರಿಶೀಲಿಸಿ, ಅಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಲು ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಕಾಮಗಾರಿ ನಡೆಯುವ ಸ್ಥಳಗಳಿಗೆ ಸ್ವತಃ ಅಧಿಕಾರಿಗಳೇ ಭೇಟಿ ನೀಡಿ ಪರಿಶೀಲಿಸಬೇಕು, ಕಂಕನಾಡಿ ಹಾಗೂ ಕದ್ರಿ ಮಾರುಕಟ್ಟೆಯ ಕಾಮಗಾರಿ ಮುಂಬರುವ ನವೆಂಬರ್‍ನಲ್ಲಿ ಪೂರ್ಣಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಡಾ. ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಉಪಮೇಯರ್ ಸುಮಂಗಳ ರಾವ್, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ವೇದಿಕೆಯಲ್ಲಿದ್ದರು.
ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.