12:19 AM Monday2 - December 2024
ಬ್ರೇಕಿಂಗ್ ನ್ಯೂಸ್
ಮಲೆನಾಡಲ್ಲಿ ಫೆಂಗಲ್ ಅಬ್ಬರ: ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ; ಕಾಫಿ ಬೆಳೆಗಾರರು ಕಂಗಾಲು ತುಮಕೂರು: ಭೀಕರ ರಸ್ತೆ ಅಪಘಾತ; 3 ಮಂದಿ ಮಹಿಳೆಯರ ದಾರುಣ ಸಾವು ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು… ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ: ರೈತ ಸಂಘದಿಂದ ಆರೋಪ;… ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಯತ್ನಾಳ್ ಬಿಡುಗಡೆ ಮಾಡಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಂಜನಗೂಡು: ಪವಾಡ ಪುರುಷ ಶ್ರೀ ಮಹದೇವ ತಾತ ಗದ್ದುಗೆಯಲ್ಲಿ ವಿಶೇಷ ಪೂಜೆ

ಇತ್ತೀಚಿನ ಸುದ್ದಿ

ಮಂಗಳೂರು: ಕೊಂಕಣಿ ಸಾಹಿತಿ, ಸಂಘಟಕ ಸಿಕೇರಾಮ್ ಅವರಿಗೆ ನುಡಿನಮನ

07/06/2024, 22:51

ಮಂಗಳೂರು(reporterkarnataka.com): ಇತ್ತೀಚೆಗೆ ಅಗಲಿದ ಹಿರಿಯ ಕೊಂಕಣಿ ಸಾಹಿತಿ, ಸಂಘಟಕ ಮತ್ತು ಕಲಾವಿದರ ಸಂಘಟನೆಯ ಅಧ್ಯಕ್ಷ ಸಿಕೇರಾಮ್, ಸುರತ್ಕಲ್ ಅವರಿಗೆ ನುಡಿನಮನ ಕಾರ್ಯಕ್ರಮ ನಗರದ ಬೆಂದೂರ್ ಮಿನಿ ಸಭಾಗೃಹದಲ್ಲಿ, ಅವರ 70 ಜನ್ಮದಿನದಂದು ಜರುಗಿತು. ಸಿಕೇರಾಮ್ ಅವರ ಅತ್ಯಂತ ಕಿರಿಯ ಅಭಿಮಾನಿ ಪುಟಾಣಿ ಜೊಅನ್ ನೈರಾ ಮೊರಾಸ್ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡುವುದರ ಮೂಲಕ ನುಡಿನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಿಕೇರಾಮ್, ಸುರತ್ಕಲ್ ಕಾವ್ಯನಾಮದಿಂದಲೇ ಖ್ಯಾತರಾಗಿರುವ ರೊನಾಲ್ಡ್ ಜೋಸೆಫ್ ಸಿಕ್ವೇರಾ ಅವರ ಬದುಕಿನ ಬಗ್ಗೆ ಎವ್ಲಾಲಿಯಾ ಡಿ ಸೋಜಾ ಮಾತನಾಡಿ ಅವರ ಅಪರೂಪದ, ಜನಾನುರಾಗಿ – ಜೀವನೋತ್ಸಾಹಿ ವ್ಯಕ್ತಿತ್ವದ ವಿಭಿನ್ನಮಜಲುಗಳನ್ನು ತೆರೆದಿಟ್ಟರು. ” ರೊನಾಲ್ಡ್ ಹನ್ನೆರಡು ಭಾಷೆಗಳನ್ನು ಬಲ್ಲವರಾಗಿದ್ದು, ಕೊಂಕಣಿ – ಕನ್ನಡ ಮಾತ್ರವಲ್ಲ ಹಿಂದೀ ಗೀತೆಗಳ ಬಗ್ಗೆಯೂ ಅವರಿಗೆ ಅಪಾರ ಜ್ಞಾನವಿತ್ತು. ವಿಲ್ಪಿ ರೆಬಿಂಬಸ್ – ಮೊಹಮ್ಮದ್ ರಫೀ ಹಾಡುಗಳೆಲ್ಲವೂ ಅವರಿಗೆ ಕಂಠಪಾಠ ಇದ್ದವು. ಇಳಿವಯಸ್ಸಿನಲ್ಲೂ ತಬ್ಲಾ ತರಗತಿಗೆ ಹಾಜರಾಗುತ್ತಿದ್ದರು. ಅಮೆಚೂರ್ ರೇಡಿಯೊ ಕ್ಲಬ್ ಸದಸ್ಯರಾಗಿದ್ದ ಅವರು ಹ್ಯಾಮ್ ರೇಡಿಯೊ ಹೊಂದಿದ್ದರು. ಇಂಟರ್‌ನ್ಯಾಶನಲ್ ಟೋಸ್ಟ್ ಮಾಸ್ಟರ್ ಕ್ಲಬ್ ಸದಸ್ಯರಾಗಿದ್ದರು. ಸದ್ದಿಲ್ಲದೇ ಎಷ್ಟೋ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದರು. ಅವರ ಸಂಪರ್ಕಕ್ಕೆ ಬರುವ ಪ್ರತೀಯೊಬ್ಬರ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಮತ್ತು ಪ್ರತೀ ವಿಶೇಷ ದಿನವನ್ನು ನೆನಪಿಟ್ಟುಕೊಂಡು ತಪ್ಪದೇ ಮೊತ್ತ ಮೊದಲು ಶುಭಕೋರುತ್ತಿದ್ದರು” ಎಂದರು.
ಸಿಕೇರಾಮ್ ಸುರತ್ಕಲ್ ಅವರ ಸಣ್ಣಕತೆ ಮತ್ತು ಲಲಿತ ಸಾಹಿತ್ಯದ ಬಗ್ಗೆ ಆರ್ಸೊ ಪತ್ರಿಕೆಯ ಸಂಪಾದಕ ಕವಿ ವಿಲ್ಸನ್, ಕಟೀಲ್ ಮಾತನಾಡಿ “ಅವರ ಪ್ರತೀ ಸಣ್ಣಕತೆಯಲ್ಲಿ ಕೃಷಿಪ್ರಧಾನ ಕುಟುಂಬದ ಪುರುಷ – ಮಹಿಳೆಯರೇ ಪ್ರಧಾನ ಪಾತ್ರವಾಗಿರುತ್ತಿದ್ದರು. ರೈತ ಉಳುಮೆಯ ಹೊತ್ತಿನಲಿ ಉಪಯೋಗಿಸುವ ಬೆತ್ತವನ್ನೂ ಪ್ರತಿಮೆಯಾಗಿ ಬಳಸಿ ಕಥೆಯೊಳಗೂ ಕಾವ್ಯ ಕಟ್ಟುವ ಅಪರೂಪದ ಗುಣ ಅವರ ಬರವಣಿಗೆಯಲ್ಲಿತ್ತು. ಕಥೆ – ಲಲಿತ ಬರಹಗಳ ತುಲನೆಯಲ್ಲಿ ಅವರು ಬರೆದ ಕವಿತೆಗಳ ಸಂಖ್ಯೆ ಕಡಿಮೆಯಾದರೂ – ಸಮಕಾಲೀನ ಕೊಂಕಣಿ ಕಾವ್ಯದ ಸಂದರ್ಭದಲ್ಲಿ ಗಮನಾರ್ಹ ಕವಿತೆಗಳನ್ನು ಅವರು ಬರೆದಿದ್ದಾರೆ ” ಎಂದರು.
ಇದೇ ಸಂದರ್ಭದಲ್ಲಿ ವಿಲ್ಸನ್ ಕಟೀಲ್ ಸಂಪಾದಕತ್ವದಲ್ಲಿ ಸಿಕೇರಾಮ್ ಜೀವನ ಮತ್ತು ಸಾಹಿತ್ಯದ ಬಗ್ಗೆ ಆರ್ಸೊ ವಿಶೇಷ ಸಂಚಿಕೆಯನ್ನು ಕವಿತಾ ಟ್ರಸ್ಟ್ ಅಧ್ಯಕ್ಷ, ಕತೆಗಾರ ಕಿಶೂ, ಬಾರ್ಕೂರ್ ಬಿಡುಗಡೆಗೊಳಿಸಿದರು. ಪತ್ರಿಕೆಯ ಪ್ರಕಾಶಕ ಎಚ್. ಎಂ. ಪೆರ್ನಾಲ್, ವಿನ್ಯಾಸಕ ಎಡ್ಡಿ ಸಿಕ್ವೇರಾ, ಸಂಪಾದಕ ಮಂಡಳಿ ಸದಸ್ಯರಾದ ರೋಶು, ಬಜ್ಪೆ, ಸ್ಟ್ಯಾನಿ ಬೇಳ ಮತ್ತು ಅಲ್ಪೋನ್ಸ್ ಮೆಂಡೋನ್ಸಾ ಹಾಜರಿದ್ದರು.
ಮಂಗಳೂರು ಅಮೆಚೂರ್ ರೇಡಿಯೊ ಕ್ಲಬ್ ಪದಾಧಿಕಾರಿ ಮತ್ತು ಸದಸ್ಯರು ಹಾಜರಿದ್ದು ಅಗಲಿದ ಕ್ಲಬ್ ಸದಸ್ಯ ರೊನಾಲ್ಡ್ ಸಿಕ್ವೇರಾ ಬರೆದ “ನಿನ್ನ ಕಾಣುವ ಹಂಬಲ” ಗೀತೆಯನ್ನು ಎನ್‍ಐ‍ಟಿ‍ಕೆ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀನಿಧಿ ರಾಗ ಸಂಯೋಜಿಸಿ ಹಾಡಿದರು. ರೇಡಿಯೊ ಕ್ಲಬ್ಬಿನ ಇನೋರ್ವ ಸದಸ್ಯ ಎನ್‍ಐ‍ಟಿ‍ಕೆ ಪ್ರಾಧ್ಯಪಕ ಡಾ. ಕೆ. ವಿ. ಗಂಗಾಧರನ್ – ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಸುರತ್ಕಲ್ ಮತ್ತು ಮಣಿಪಾಲ – ಹೀಗೆ ಮೂರೂ ಹ್ಯಾಮ್ ಅಮೆಚೂರ್ ರೇಡಿಯೊ ಕ್ಲಬ್‌ಗಳಲ್ಲಿ ರೊನಾಲ್ಡ್ ಸಿಕ್ವೇರಾ ಅವರ ಆತ್ಮೀಯ ಒಡನಾಟದ ಬಗ್ಗೆ ವಿವರಿಸಿದರು.
ರೊನಾಲ್ಡ್ ಸಿಕ್ವೇರಾ ಸದಸ್ಯರಾಗಿದ್ದ ಕೊಂಕಣಿ ಇಂಟರ್‌ನ್ಯಾಶನಲ್ ಟೋಸ್ಟ್ ಮಾಸ್ಟರ್ ಕ್ಲಬ್ ಪರವಾಗಿ ಪದಾಧಿಕಾರಿ ಪೀಟರ್ ಆಲ್ವಿನ್ ಡಿ ಸೊಜಾ ಮಾತನಾಡಿ ನುಡಿನಮನ ಸಲ್ಲಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಸಿಕೇರಾಮ್ ಸುರತ್ಕಲ್ ಕುರಿತು ಬರೆಯಲಾದ ಕವಿತೆಯನ್ನು ವಾಚಿಸಿ ನುಡಿನಮನ ಸಲ್ಲಿಸಿದರು.
ರೊನಾಲ್ಡ್ ಜೋಸೆಫ್ ಸಿಕ್ವೇರಾ ಅವರ ಪತ್ನಿ ಗ್ರೇಸಿ ಮತ್ತು ಪುತ್ರಿ ರೀಮಾ ಹಾಜರಿದ್ದು, ರೀಮಾ ಕುಟುಂಬದ ಪರವಾಗಿ ಮಾತನಾಡಿ ರೊನಾಲ್ದ್ ಅವರ 70 ನೇ ಜನ್ಮದಿನದಂದು ಈ ಕಾರ್ಯಕ್ರಮ ಆಯೋಜಿಸಿದ್ದು ಅರ್ಥಪೂರ್ಣ ಎಂದರು.
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಎಡುಕೇರ್ ವಿದ್ಯಾನಿಧಿ ಯೋಜನೆಯ ಮುಖ್ಯಸ್ಥ ಸ್ಟೀಫನ್ ಪಿಂಟೊ, ಹಿರಿಯ ಲೆಕ್ಕ ಪರಿಶೋಧಕ ಆರ್. ಡಿ. ಶಾಸ್ತ್ರಿ, ಭಾಷಾತಜ್ಞೆ ಪ್ರೊ| ಡಾ| ಜೀತಾ ಲೊಬೊ, ಪ್ರಶಸ್ತಿ ವಿಜೇತ ಹಿರಿಯ ಕೊಂಕಣಿ ಸಾಹಿತಿ ರೋನ್ ರೋಚ್ ಕಾಸ್ಸಿಯಾ, ಸಮಾಜ ಸೇವಕ ಮಹೇಶ್ ಲೆಸ್ಟರ್, ಆರ್ಕಿಡ್ ಆರ್ಟ್ ಗ್ಯಾಲರಿ ಮಾಲಕ, ಖ್ಯಾತ ಇಂಗ್ಲಿಷ್ ಲೇಖಕ ವಿಲಿಯಮ್ ಪಾಯ್ಸ್, ರೋಶನ್ ಮಾಡ್ತಾ, ಸೋನಿಯಾ ಕ್ರಾಸ್ತಾ, ರೋಬರ್ಟ್ ಮಡಂತ್ಯಾರ್ ಹಾಗೂ ಇತರ ಗಣ್ಯರು ಹಾಜರಿದ್ದರು.
ಪತ್ರಕರ್ತ ಎಚ್. ಎಂ. ಪೆರ್ನಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಎಡ್ಡಿ ಸಿಕ್ವೇರಾ ನಿರೂಪಿಸಿದರು. ಕವಿ, ಚಿಂತಕ ಟೈಟಸ್ ನೊರೊನ್ಹಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು