ಇತ್ತೀಚಿನ ಸುದ್ದಿ
ಮಂಗಳೂರು ದಸರಾ ಮೆರವಣಿಗೆಯಲ್ಲಿ ದೈವ ದೇವರ ಅವಹೇಳನಕಾರಿ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ: ಪದ್ಮರಾಜ್ ಆರ್.
09/10/2023, 15:55
ಮಂಗಳೂರು(reporterkarnataka.com): ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶದಂತೆ, ಕುದ್ರೋಳಿ ಕ್ಷೇತ್ರದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಎಲ್ಲರನ್ನೂ ಜತೆ ಸೇರಿಸಿಕೊಂಡು ಸಾಮರಸ್ಯದ ದಸರಾ ಆಚರಿಸಲಾಗುತ್ತಿದ್ದು, ಮೆರವಣಿಗೆಯಲ್ಲಿ ತುಳುನಾಡಿನ ದೈವ ದೇವರನ್ನು ಅವಹೇಳನ ಮಾಡುವ ಸ್ತಬ್ಧಚಿತ್ರಗಳಿಗೆ ಅವಕಾಶ ಇರುವುದಿಲ್ಲ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.
ಮಂಗಳೂರು ದಸರಾ ಮಹೋತ್ಸವ ಸಿದ್ಧತೆ ಹಾಗೂ ಸಂಘ-ಸಂಸ್ಥೆಗಳಿಗೆ ಜವಾಬ್ದಾರಿ ಹಂಚಿಕೆಗಾಗಿ ಕುದ್ರೋಳಿ ಕ್ಷೇತ್ರದಲ್ಲಿ ಭಾನುವಾರ ನಡೆದ ಸ್ವಯಂಸೇವಕರು ಮತ್ತು ಸಂಘ ಸಂಸ್ಥೆಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
24ರಂದು ಮೆರವಣಿಗೆ:
ಸಾಮರಸ್ಯದ ದಸರಾದಲ್ಲಿ ಪಾಲ್ಗೊಳ್ಳಲು ಹೊಸ ಸಂಘ ಸಂಸ್ಥೆಗಳು ಆಸಕ್ತಿ ವಹಿಸಿವೆ. ದಸರಾ ಮೆರವಣಿಗೆ ಅ.24ರಂದು ಸಂಜೆ 4ಕ್ಕೆ ಆರಂಭವಾಗಲಿದೆ. ಮೆರವಣಿಗೆಯ ಟ್ಯಾಬ್ಲೊಗಳಲ್ಲಿ ಯಾವುದೇ ಜಾತಿ, ಮತ, ಸಮುದಾಯ, ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ನಾಸಿಕ್ ಬ್ಯಾಂಡ್ ತಂಡಗಳು ಈ ಬಾರಿ ಪೊಲೀಸ್ ಇಲಾಖೆಯಿಂದ ವಿಶೇಷ ಅನುಮತಿ ಪಡೆಯಬೇಕು ಎಂದು ಸೂಚನೆ ಬಂದಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ಕನ್ನಡ ಸಂಸ್ಕೃತಿ ಇಲಾಖೆಯ ಕಲಾತಂಡಗಳಿಗೂ ಸೂಕ್ತ ವ್ಯವಸ್ಥೆ ಮಾಡಿಕೊಡುವ ಜವಾಬ್ದಾರಿಯಿದ್ದು, ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ:
ಈ ಬಾರಿಯ ದಸರಾ ಮಹೋತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ಪ್ರತಿವರ್ಷದಂತೆ ದಸರಾ ಮಹೋತ್ಸವ ಮತ್ತು ಮೆರವಣಿಗೆ ವೈಭವದಿಂದ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿ, ಸದಸ್ಯರು ತೊಡಗಿಸಿಕೊಳ್ಳಬೇಕು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ವ್ಯವಸ್ಥೆಗಳ ಬಗ್ಗೆ ಸಿದ್ಧತೆ ನಡೆಯುತ್ತಿದ್ದು, ಎಲ್ಲರ ಸಲಹೆ ಸೂಚನೆಗಳು ಅಗತ್ಯ ಎಂದು ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಹೇಳಿದರು.
1.30 ಕೋಟಿ ವೆಚ್ಚದಲ್ಲಿ ವಿದ್ಯುತ್ ಅಲಂಕಾರ:
ಮಂಗಳೂರು ನಗರದಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಹಾನಗರ ಪಾಲಿಕೆ ವತಿಯಿಂದ ನಡೆಯಲಿದೆ. ಎಂದು ಮಾಜಿ ಮೇಯರ್ ಜಯಾನಂದ ಅಂಚನ್ ಹೇಳಿದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕ್ಷೇತ್ರಾಡಳಿತ ಸಮಿತಿ ಸದಸ್ಯರಾದ ಮಹೇಶ್ಚಂದ್ರ, ರವಿಶಂಕರ್ ಮಿಜಾರ್, ಶೇಖರ ಪೂಜಾರಿ, ಜಗದೀಪ್ ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಚಿತ್ತರಂಜನ್, ಶೈಲೇಂದ್ರ ಸುವರ್ಣ, ಲೀಲಾಕ್ಷ ಕರ್ಕೇರ, ಗೌರವಿ ಪಿ.ಕೆ., ರಾಧಾಕೃಷ್ಣ, ವಾಸುದೇವ ಕೋಟ್ಯಾನ್ ಮೊದಲಾದವರು ಭಾಗವಹಿಸಿದ್ದರು.