ಇತ್ತೀಚಿನ ಸುದ್ದಿ
ಮಂಗಳೂರು: ಭಾರತ ಸೇವಾದಳ ದ.ಕ. ಜಿಲ್ಲಾ ಸಮಿತಿ ವತಿಯಿಂದ ಸೇವಾದಳದ ಶತಮಾನೋತ್ಸವ
29/12/2023, 17:53
ಮಂಗಳೂರು(reporterkarnataka.com): ಭಾರತ ಸೇವಾ ದಳ ಜಿಲ್ಲಾ ಸಮಿತಿ ವತಿಯಿಂದ ಇಂದು ಸೇವಾದಳದ ಶತಮಾನೋತ್ಸವ ಅಂಗವಾಗಿ ಕಾರ್ಯಕ್ರಮ ನಗರದ ಪುರಭವನದ ಬಳಿಯಿರುವ ಗಾಂಧಿ ಪ್ರತಿಮೆ ಬಳಿ ನಡೆಯಿತು.
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳಷ್ಟು ಯುವಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೀವನದಲ್ಲಿ ಅವಕಾಶ ಸಿಗುವುದು ಕಡಿಮೆ. ಅದೇ ರೀತಿ ಇಂದು ಶಾಲಾ ವಿದ್ಯಾರ್ಥಿಗಳಿಗೆ ಇರುವಂತಹ ಭಾರತ ಸೇವಾದಳದಲ್ಲಿ ಇದ್ದು ದೇಶ ಸೇವೆಯ ಬಗ್ಗೆ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಲಿಯುವುದು ನಿಮ್ಮೆಲ್ಲರ ಭಾಗ್ಯ. ಇದನ್ನು ನೀವು ಸದುಪಯೋಗ ಪಡಿಸಬೇಕು. ಸೇವಾದಳ ಎಂಬುದು ದೇಶದ ದೊಡ್ಡ ಸಂಘಟನೆ. ಅದರಲ್ಲಿ ಇದ್ದು ಭವಿಷ್ಯದಲ್ಲಿ ನಿಮಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ. ನಾನು ಕೂಡ ಸೇವಾದಳ ಕಾರ್ಯಕರ್ತನಾಗಿ ಸೇವೆ ಮತ್ತು ಕೆಲಸ ಮಾಡಿಕೊಂಡು ಬಂದಿರುವುದರಿಂದ ಈ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ಪ್ರಾರಂಭದಲ್ಲಿ ಸುಮಾರು 300 ಮಂದಿ ಸೇವಾದಳದ ಶಾಲಾ ವಿದ್ಯಾರ್ಥಿಗಳು ನಗರದ ಬಲ್ಮಟ್ಟದಲ್ಲಿರುವ ಸರಕಾರಿ ಹೆಮ್ಮಕ್ಕಳ ಪದವಿ ಪೂರ್ವ ಕಾಲೇಜು ಆವರಣದಿಂದ ಪುರಭವನ ಗಾಂಧಿ ಪಾರ್ಕ್ ವರೆಗೆ ಪುರ ಮೆರವಣಿಗೆ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ದೇಶದ ಭವಿಷ್ಯಕ್ಕೆ ಸೇವಾದಳದ ಅಗತ್ಯವಿದೆ. ಸೇವಾದಳದ ವಿದ್ಯಾರ್ಥಿಗಳಿಗೆ ನೀಡುವಂತಹ ಶಿಸ್ತಿನ ಪಾಠದಿಂದ ಸುಂದರ ಭಾರತ ನಿರ್ಮಾಣವಾಗಲಿ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ, ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಪದಾಧಿಕಾರಿಗಳಾದ ಉದಯ್ ಕುಂದರ್, ಪ್ರೇಮ್ ಚಂದ್, ಕೃತಿನ್ ಕುಮಾರ್, ಸಂಘಟಕ ಮಂಜೇಗೌಡ,ಬೆಂಗ್ರೆ ಶಾಲಾ ಸಮಿತಿ ಅಧ್ಯಕ್ಷ ರಾಕೇಶ್, ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು.