ಇತ್ತೀಚಿನ ಸುದ್ದಿ
ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ
19/09/2022, 21:08

ಮಂಗಳೂರು(reporterkarnataka.com):ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಮತ್ತು ಇಫ್ಕೋ ಆಶ್ರಯದಲ್ಲಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ 2022 ಮತ್ತು ಸಸಿ ನೆಡುವ ಕಾರ್ಯಕ್ರಮ ಜರುಗಿತು.
ದ.ಕ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಂಕರಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಪೋಷಣ ಮಾಹೆಯ ಪ್ರಾಮುಖ್ಯತೆಯನ್ನು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥರು ಡಾ. ಟಿ. ಜೆ. ರಮೇಶ ಮಾತನಾಡಿ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮತ್ತು ಮೀನು ಸೇವನೆಯ ಪ್ರಾಮುಖ್ಯತೆಯ ಕುರಿತ ಉಪನ್ಯಾಸವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಸ್ತ್ರೀ ಶಕ್ತಿ ಬಳಗದ ಅಧ್ಯಕ್ಷರಾದ ಹರಿಣಿ ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ರಶ್ಮಿ.ಆರ್. ಮಾತನಾಡಿ, ಕೈತೋಟದ ನಿರ್ಮಾಣ ಒಂದು ಕಲೆ,ಇದೊಂದು ಉತ್ತಮ ಹವ್ಯಾಸವೂ ಹೌದು. ಇದನ್ನು ಅತ್ಯಂತ ಕಡಿಮೆ ವೆಚ್ಚ ಹಾಗೂ ಶ್ರಮದಿಂದ ಮಾಡಿದರೆ ಹೆಚ್ಚು ಪ್ರತಿಫಲ ಕೊಡುತ್ತದೆ. ಕೈತೋಟ ಮಾಡಲು ಉಪಯೋಗಿಸುವ ಕಾಲ ಮತ್ತು ಶ್ರಮದಾನ ನಮಗೆ ಉತ್ತಮ ಆರೋಗ್ಯ ನೀಡುವುದಲ್ಲದೆ ಅಲ್ಪ ಸ್ವಲ್ಪ ಆದಾಯವನ್ನು ನೀಡಬಲ್ಲರು. ಕಡಿಮೆ ದುಡ್ಡಿನಲ್ಲಿ ಸ್ವಲ್ಪ ಸ್ಥಳಾವಕಾಶದಲ್ಲಿ ಉತ್ಕೃಷ್ಟ ಮತ್ತು ಅಧಿಕ ಪೌಷ್ಠಿಕತೆಯ ತರಕಾರಿಗಳ ಉತ್ಪಾದನೆ ಬಹಳ ಮಹತ್ವವಸಿಕೊಂಡಿದೆ.ಎಂದು ಕೈತೋಟದ ಪ್ರಾಮುಖ್ಯತೆ ಮತ್ತು ಜೈವಿಕ ಬಲವರ್ಧಿತ ತಳಿಗಳು ಮತ್ತು ಸಿರಿ ದ್ಯಾನಗಳ ಪಾತ್ರದ ಬಗ್ಗೆ ಅರಿವು ಮೂಡಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜಿತ ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ 100 ತರಕಾರಿ ಬೀಜಗಳ ಪ್ಯಾಕೆಟ್,15 ಪಪ್ಪಾಯ ಸಸಿಗಳನ್ನು ಇಪ್ಕೋ ವತಿಯಿಂದ ವಿತರಿಸಿ ಮತ್ತು ತೆಂಗಿನ ಸಸಿ ನೆಡುವ ಮೂಲಕ ಪೋಷಣ
ಅಭಿಯಾನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ 141 ಆಶಾ ಕಾರ್ಯಕರ್ತೆಯರು, ಸ್ತ್ರೀ ಸಂಘ ಮಹಿಳೆಯರು, ಕೃಷಿಕರು, ರೈತ ಮಹಿಳೆಯರು, ಪರಿಕರ ಮಾರಾಟಗಾರರು, ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.