ಇತ್ತೀಚಿನ ಸುದ್ದಿ
ಮಂಗಳೂರಿಗೆ ಸರಬರಾಜು ಆಗುವ ನೀರಿಗೆ ದಾರಿಯಲ್ಲೇ ಕನ್ನ: ಪಾಲಿಕೆಯಿಂದ ಅಕ್ರಮ ಸಂಪರ್ಕ ತೆರವು
03/02/2024, 21:58
ಮಂಗಳೂರು(reporterkarnataka.com): ಮಂಗಳೂರು ಮಹಾನಗರಪಾಲಿಕೆಗೆ ತುಂಬೆ ಅಣೆಕಟ್ಟಿನಿಂದ ಸರಬರಾಜು ಮಾಡುವ ಮುಖ್ಯ ಪೈಪ್ ಲೈನಿಂದ ಮಾಡಲಾದ ಅಕ್ರಮ ಸಂಪರ್ಕವನ್ನು ಶನಿವಾರ ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು.
ತುಂಬೆಯಿಂದ ಪಂಪ್ ಮಾಡಲಾಗುವ ಕುಡಿಯುವ ನೀರನ್ನು ಪಂಚಾಯತ್ ವ್ಯಾಪ್ತಿ ಮೂಲಕ ಹಾದು ಹೋಗಿರುವ ಮುಖ್ಯ ಕೊಳವೆಯಿಂದ ವಿವಿಧ ಪಂಚಾಯತ್ ವ್ಯಾಪ್ತಿಗಳಲ್ಲಿ ಕಟ್ಟಡ ರಚನೆಗೆ, ವಾಣಿಜ್ಯ ಉದ್ದೇಶಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನಧಿಕೃತ ಜೋಡಣೆ ಮೂಲಕ ನೀರು ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿತ್ತು. ಇದರಿಂದಾಗಿ ಪಾಲಿಕೆ ವ್ಯಾಪ್ತಿಗೆ ನೀರಿನ ಪೂರೈಕೆಯ ಪ್ರಮಾಣ ಕಡಿಮೆಯಾಗುತ್ತಿದ್ದ ಪ್ರಯುಕ್ತ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದಿರುವ ಹಿನ್ನೆಲೆಯಲ್ಲಿ ಶನಿವಾರ ಪಾಲಿಕೆ ಅಧಿಕಾರಿಗಳ 3 ತಂಡಗಳನ್ನು ರಚಿಸಿ ತೆರವು ಕಾರ್ಯಾಚರಣೆ ನಡೆಸಲಾಯಿತು. ತುಂಬೆ, ಪುದು ಮತ್ತು ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪರಿಶೀಲಿಸಿದಾಗ ಅನಧಿಕೃತವಾಗಿ ಮುಖ್ಯ ಕೊಳವೆ ಮಾರ್ಗದಿಂದ ಕಟ್ಟಡ ರಚನೆಗೆ, ಕೃಷಿ ಚಟುವಟಿಕೆಗೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವ ನೀರಿನ ಅನಧಿಕೃತ ಜೋಡಣೆಗಳನ್ನು ಪೋಲೀಸ್ ಇಲಾಖೆ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಕಾರ್ಯಾಚರಣೆಯ ಮೂಲಕ ಕಡಿತಗೊಳಿಸಲಾಯಿತು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.