ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ವೆಂಕಟೇಶ ನಾಯಕ್ ಗೆ ಪಿಎಚ್ ಡಿ ಪದವಿ ಪ್ರದಾನ ಮಾಡಿದೆ.
07/02/2026, 17:45
ಮಂಗಳೂರು(reporterkarnataka.com): ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ವೆಂಕಟೇಶ್ ನಾಯಕ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ
ಪಿಎಚ್ ಡಿ ಪದವಿ ಪ್ರದಾನ ಮಾಡಿದೆ.
ವೆಂಕಟೇಶ ನಾಯಕ್ ಅವರು *“ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ – ಒಂದು ಪ್ರಕರಣ ಅಧ್ಯಯನ”* ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರೌಢ ಪ್ರಬಂಧವನ್ನು ಸಲ್ಲಿಸಿದ್ದರು. ಈ ಅಧ್ಯಯನವು ವಿಶೇಷವಾಗಿ ಅತೀ ಅಸುರಕ್ಷಿತ ಜನಾಂಗ (PVTG) ಆಗಿರುವ ಕೊರಗ ಸಮುದಾಯದಲ್ಲಿ ಹಣಕಾಸು ಒಳಗೊಳ್ಳುವಿಕೆ ಕಾರ್ಯಕ್ರಮಗಳ ವ್ಯಾಪ್ತಿ, ಸವಾಲುಗಳು ಹಾಗೂ ಪರಿಣಾಮಗಳನ್ನು ವಿಶ್ಲೇಷಿಸಿ, ಸಮಾವೇಶಿತ ಅಭಿವೃದ್ಧಿಗೆ ಸಂಬಂಧಿಸಿದ ನೀತಿಪೂರಕ ಫಲಿತಗಳನ್ನು ನೀಡಿದೆ.
ಈ ಸಂಶೋಧನೆಗೆ ಡಾ . ಜಯವಂತ ನಾಯಕ್( ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು) ಇವರು ಮಾರ್ಗದರ್ಶಕರಾಗಿದ್ದರು. ಪ್ರಬಂಧವನ್ನು ಬಾಹ್ಯ ಪರೀಕ್ಷಕರಾಗಿ ಡಾ ಎಸ್ ಎನ್ ಯೋಗೀಶ್, ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಮತ್ತು ತಮಿಳುನಾಡಿನ ಗಾಂಧಿಗ್ರಾಮ ರೂರಲ್ ಇನ್ಸ್ಟಿಟ್ಯೂಟ್ ನ ಹಿರಿಯ ಪ್ರಾಧ್ಯಾಪಕರು ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಂದ್ರನ್ ಅವರು ಮೌಲ್ಯಮಾಪನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಮೌಖಿಕ ಪರೀಕ್ಷೆ ನಡೆಯಿತು.
ಯಶಸ್ವಿ ಮೌಖಿಕ ಪರೀಕ್ಷೆಯ ನಂತರ ಪದವಿ ಪ್ರದಾನದ ಘೋಷಣೆ ಡಾ. ಜಗದೀಶ್ ಟಿ. ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಅರ್ಥಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡಾ. ಮುನಿರಾಜು ವೈ ಪ್ರಾಧ್ಯಾಪಕರು ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮಾಜಿ ಡೀನ್, ಮಂಗಳೂರು ವಿಶ್ವವಿದ್ಯಾಲಯ; ಡಾ. ರಾಮಕೃಷ್ಣ ಬಿ ಎಂ, ಪ್ರಾಧ್ಯಾಪಕರು ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು; ಡಾ ಸುಭಾಷಿಣಿ ಶ್ರೀವತ್ಸ, ಪ್ರಾಧ್ಯಾಪಕರು; ಡಾ ಜಗದೀಶ್, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು; ಡಾ. ಮಾಧವ, ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ; ಉಪನ್ಯಾಸಕರಾದ ರಾಜೇಶ್ ಕುಮಾರ್ ಸೇರಿದಂತೆ ಇತರ ಬೋಧಕ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವೆಂಕಟೇಶ ನಾಯಕ್ ಅವರು ಗೋಪಾಲಕೃಷ್ಣ ನಾಯಕ್ ಮತ್ತು ದಿವಂಗತ ಜ್ಯೋತಿ ನಾಯಕ್ ಅವರ ಪುತ್ರ. ಅವರ ಪತ್ನಿ ಕಾವ್ಯ ಪಿ ಹೆಗ್ಡೆ, (ಸಹಾಯಕ ಪ್ರಾಧ್ಯಾಪಕರು, ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ಅಧ್ಯಯನ ವಿಭಾಗ, ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ, ಕಾಸರಗೋಡು) ಅವರು ಕೂಡ ಉಪಸ್ಥಿತರಿದ್ದರು.
ಈ ಸಂಶೋಧನೆ ಕರ್ನಾಟಕದ ಬುಡಕಟ್ಟು ಸಮುದಾಯಗಳ ಹಣಕಾಸು ಒಳಗೊಳ್ಳುವಿಕೆ ಕುರಿತು ಶೈಕ್ಷಣಿಕ ವಲಯ ಹಾಗೂ ನೀತಿ ರೂಪಿಸುವ ಚರ್ಚೆಗಳಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.












