ಇತ್ತೀಚಿನ ಸುದ್ದಿ
ಮಂಗಳೂರು ಏರ್ ಪೋರ್ಟ್: ಗುಡುಗು ಮಳೆಗೆ ಲ್ಯಾಂಡ್ ಆಗದೆ ವಾಪಸ್ ಹೋದ 3 ವಿಮಾನಗಳ ಪೈಕಿ ಮತ್ತೆ ಹಿಂತಿರುಗಿದ 2 ಫ್ಲೈಟ್
13/03/2025, 20:32

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು.
info.reporterkarnataka@gmail.com
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಸುರಿದ ಗುಡುಗು ಸಹಿತ ಮಳೆಯ ಪರಿಣಾಮ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ 3 ವಿಮಾನಗಳು ವಾಪಸ್ ಹೋಗಿವೆ. ಅದರಲ್ಲಿ ಎರಡು ವಿಮಾನಗಳು ಮತ್ತೆ ಆಗಮಿಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿವೆ.
ವಿಮಾನ ನಿಲ್ದಾಣವಿರುವ ಬಜಪೆ ಪ್ರದೇಶದಲ್ಲಿ ದಟ್ಟ ಮೋಡ ಹಾಗೂ ಗುಡುಗು ಸಹಿತ ಮಳೆಯಾದ ಪರಿಣಾಮ ಹೈದರಾಬಾದ್ ನಿಂದ
ಮಂಗಳೂರಿಗೆ ಆಗಮಿಸಿದ ವಿಮಾನ ಇಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಹೈದರಾಬಾದ್ ಗೆ ವಾಪಸ್ ಹೋಗಿತ್ತು. ಅದರೆ, ಅದು ಮತ್ತೆ ವಾಪಸ್ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಎರಡು ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ನೆರೆಯ ಕೇರಳ ರಾಜ್ಯದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಅದರಲ್ಲಿ ಒಂದು ವಿಮಾನ ಮತ್ತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಸಂಜೆ ದಿಢೀರ್ ಮಳೆಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೀರಿದ ಪರಿಣಾಮ ದಿಢೀರ್ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ಆಲಿಕಲ್ಲಿನ ಸುರಿಮಳೆಯಾಗಿತ್ತು. ಮಂಗಳೂರಿನ ಬಜಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬಂಟ್ವಾಳದಲ್ಲಿ ಹಲವು ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗಿತ್ತು.