ಇತ್ತೀಚಿನ ಸುದ್ದಿ
ಮಳೆ ಕಡಿಮೆಯಾದರೂ ನಿಲ್ಲದ ಅನಾಹುತ; ಭೂಮಿಯ ತೇವಾಂಶ ಹೆಚ್ಚಾಗಿ ಆತಂಕದಲ್ಲಿ ಮಲೆನಾಡು ಜನರು
14/08/2022, 09:25
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಅನಾಹುತಗಳು ಅಬ್ಬರ ಕಡಿಮೆಯಾಗುತ್ತಿಲ್ಲ. ಕಳೆದ 15 ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಭೂಮಿಯ ತೇವಾಂಶ ಹೆಚ್ಚಾಗಿ ಬೆಟ್ಟ-ಗುಡ್ಡಗಳು ಕುಸಿಯುವ ಪ್ರಮಾಣ ಕೂಡ ಹೆಚ್ಚಾಗಿದೆ. ಮಳೆ ಕಡಿಮೆಯಾಗಿ ಎರಡು ದಿನವಾದರೂ ಬೆಟ್ಟ-ಗುಡ್ಡಗಳು ಕುಸಿಯುವುದು ಮಾತ್ರ ನಿಂತಿಲ್ಲ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಗ್ಗಸಗೂಡು ಗ್ರಾಮದ ರವಿಗೌಡ ಎಂಬುವರ ಮನೆ ಮುಂದಿನ ತೋಟದಲ್ಲಿ ಮಣ್ಣು ಕುಸಿದಿದೆ. ಭಾರೀ ಪ್ರಮಾಣದಲಿ ಮಣ್ಣು ಕುಸಿದ ಪರಿಣಾಮ ತೋಟದಲ್ಲಿದ್ದ ಬಾವಿಯೂ ಕೂಡ ಮುಚ್ಚಿ ಹೋಗಿದೆ. ಭೂಮಿಯ ತೇವಾಂಶ ಹೆಚ್ಚಾಗಿ ತೋಟದಲ್ಲಿನ ಗುಡ್ಡ ಜರಿಯುವ ವೇಳೆ ಮನೆಯ ಗೋಡೆ ಕೂಡ ಬಿರುಕು ಬಿಟ್ಟಿದೆ. ಮನೆಯ ಮೆಟ್ಟಿಲುಗಳು ಕೂಡ ಬಿರುಕು ಬಿಟ್ಟಿವೆ. ಮನೆಯ ಗೋಡೆಗಳು ಹಾಗೂ ಮೆಟ್ಟಿಲುಗಳು ಬಿರುಕುಬಿಟ್ಟಿರುವುದರಿಂದ ಮನೆಯವರು ಕೂಡ ಆತಂಕದಿಂದಿದ್ದಾರೆ. ಮನೆಯನ್ನ ಬಿಟ್ಟು ಸಂಬಂಧಿಗಳ ಮನೆಯಲ್ಲಿ ವಾಸವಿದ್ದಾರೆ. ಮಲೆನಾಡಲ್ಲಿ ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಿದೆ. ಮಲೆನಾಡಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆಗಿಂತ ಈ ವರ್ಷ ಹೆಚ್ಚು ಮಳೆಯಾಗಿದೆ.
ಜನವರಿಯಿಂದಲೂ ಆಗಿದಾಂಗ್ಗೆ ಮಳೆ ಸುರಿಯುತ್ತಿದ್ದು ಭೂಮಿಯ ತೇವಾಂಶ ಹೆಚ್ಚಾಗಿದೆ. ಇದರಿಂದ ಮಳೆ ನಿಂತರೂ ಅನಾಹುಗಳು ನಿಲ್ಲುತ್ತಿಲ್ಲ ಎಂದು ಸ್ಥಳಿಯರೇ ಭಾವಿಸಿದ್ದಾರೆ. 2018ರಿಂದಲೂ ಪ್ರತಿ ಮಳೆಗಾಲದಲ್ಲೂ ಮಲೆನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಈ ವರ್ಷವೂ ಅದೇ ರೀತಿ ಮಳೆಯಾಗಿದೆ. ಜೊತೆಗೆ ಇತ್ತೀಚೆಗೆ ಗಾಳಿ ಅಬ್ಬರ ಕೂಡ ಅಷ್ಟೆ ವೇಗವಾಗಿರುವುದರಿಂದ ಅನಾಹುತಗಳು ಪಟ್ಟಿಯೂ ದೊಡ್ಡದ್ದಾಗುತ್ತಿದೆ. ಮಳೆ ನಿಂತ ಮೇಲೂ ಆಗುತ್ತಿರುವ ಅನಾಹುತ ನೋಡಿ ಮಲೆನಾಡಿಗರು ಕಂಗಾಲಾಗಿದ್ದಾರೆ.