ಇತ್ತೀಚಿನ ಸುದ್ದಿ
ಮಳೆ ಬಂದ್ರೆ ಕೆಸರಿನ ಸಿಂಚನ!; ಬಿಸಿಲು ಬಿದ್ರೆ ಧೂಳಿನ ಸಂಚಲನ!: ಇದು ಕಲ್ಲಡ್ಕದ ಚತುಷ್ಪಥ ಕರ್ಮಕಥೆ!
18/09/2023, 23:29
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ನಿಂದ ಬರೀ 5 ಕಿಮೀ ದೂರದಲ್ಲಿ ಸಿಗುವ ಕಲ್ಲಡ್ಕ ಒಂದು ಸಣ್ಣ ಪೇಟೆ. ಹಲವು ಕಾರಣಗಳಿಗೆ ಇದು ಪ್ರಸಿದ್ಧಿ ಪಡೆದಿದೆ.
ಕಲ್ಲಡ್ಕ ಟೀ ತರಹದ ಕೆಲವು ಸಕರಾತ್ಮಕ ವಿಷಯಗಳಿಗೆ ಇದು ಹೆಸರುವಾಸಿಯಾದರೆ, ಇನ್ನೂ ಕೆಲವು ನಕಾರಾತ್ಮಕ ವಿಷಯಗಳಿಗೂ ಕಲ್ಲಡ್ಕದ ಬಲು ಜೋರಾಗಿದೆ. ಇದೀಗ ಕಲ್ಲಡ್ಕ ಕೆಸರು ಮತ್ತು ಧೂಳಿಗೆ ಪ್ರಸಿದ್ಧವಾಗಿದೆ.
ಕಲ್ಲಡ್ಕದಲ್ಲಿ ಹಲವು ತಿಂಗಳಿನಿಂದ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಈ ಹಿಂದೆ ನಿರ್ಮಿಸಿದ ಡಾಮರಿನ ಗಟ್ಟಿಮುಟ್ಟಾದ ರಸ್ತೆ ತುಂಬಾ ಪಿಲ್ಲರ್ ಗಳು ಎದ್ದಿವೆ. ಪೇಟೆ ಉಳಿಸಲು ಮಾಡಲುದ್ದೇಶಿಸಿದ ಫ್ಲೈ ಓವರ್ ಗಾಗಿ ಈ ಪಿಲ್ಲರ್ ಗಳು ತಲೆ ಎತ್ತಿವೆ. ನಿರ್ಮಾಣ ಹಂತದಲ್ಲಿರುವಾಗಲೇ ಪಿಲ್ಲರೊಂದು ಕುಸಿದು ಸದ್ದು ಮಾಡಿತ್ತು. ಚತುಷ್ಪಥ ಕಾಮಗಾರಿಯನ್ನು ಸರಿಯಾದ ಪೂರ್ವ ಸಿದ್ಧತೆ ಇಲ್ಲದೆ ಆರಂಭಿಸಿರುವುದರಿಂದ ಬಿಸಿಲಿಗೆ ಇಲ್ಲಿ ಧೂಳಿನ ಕಾಟವಾದರೆ, ಮಳೆಗೆ ಕೆಸರಿನ ಓಕುಳಿ. ಇದರಿಂದ ಕಲ್ಲಡ್ಕ ಸುತ್ತಮುತ್ರಲಿನ ಪ್ರದೇಶದ ನಿವಾಸಿಗಳು ಅಕ್ಷರಶಃ ಬಿಳಿ ಬಟ್ಟೆಯನ್ನೇ ಮರೆತು ಬಿಟ್ಟಿದ್ದಾರೆ.
ಪ್ರಸಕ್ತ ಬೇಸಿಗೆಯಲ್ಲಿ ಮಳೆ ತೀರಾ ಕಡಿಮೆ. ಆದರೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆಯು ರಾಡಿ ಎಬ್ಬಿಸುತ್ತಿವೆ. ಇದೀಗ ಕಳೆದ ಎಂಟು ಹತ್ತು ದಿನಗಳಿಂದ ವರ್ಷಧಾರೆಯಾಗುತ್ತಿದೆ.
ಕಲ್ಲಡ್ಕದ ಪೇಟೆಯ ಮಧ್ಯ ಹೆಬ್ಬಾವಿನ ತರಹ ಹಾದು ಹೋಗುತ್ತಿರುವುದು ರಾಷ್ಟ್ರೀಯ ಹೆದ್ದಾರಿ ಎಂದು ಯಾರಿಗೂ ಅನಿಸುತ್ತಿಲ್ಲ. ಏನೋ ಕೆಸರು ಗದ್ದೆಯಲ್ಲಿ ಪಿಲ್ಲರ್ ತಲೆ ಎತ್ತಿದ ತರಹ ಕಾಣುತ್ತದೆ.
ರಸ್ತೆಯ ಕೆಸರು ನೀರು ಪೇಟೆ ಬದಿಯಲ್ಲಿರುವ ಮನೆಯ ಅಂಗಳದವರೆಗೆ ತಲುಪುತ್ತದೆ. ಅಂಗಡಿ ಬಾಗಿಲು ತೆರೆದರೆ ಕೆಸರು ಒಳಗೆ ನುಗ್ಗುತ್ತದೆ. ಸರಿಯಾದ ಸರ್ವಿಸ್ ರಸ್ತೆ ಇಲ್ಲ. ಪಾದಚಾರಿಗಳಿಗೆ ಪಾದ ಊರಲು ಸರಿಯಾದ ವ್ಯವಸ್ಥೆ ಇಲ್ಲ. ನೀರು ಹರಿದು ಹೋಗಲು ಚರಂಡಿಯಿಲ್ಲ, ಯಾವಾಗ ನೋಡಿದ್ರೂ ಜಾಮ್…ಜಾಮ್.. ಟ್ರಾಫಿಕ್ ಜಾಮ್. ರೋಗಿಗಳು ಸಿಕ್ಕ ಹಾಕಿಕೊಂಡರೆ ದೇವರೇ ಗತಿ.
ಇದಕ್ಕೆಲ್ಲ ಮುಕ್ತಿ ನೀಡುವಂತೆ ಕಲ್ಲಡ್ಕದಲ್ಲಿ ಸ್ಥಳೀಯರು ಪ್ರತಿಭಟನೆ ಕೂಡ ನಡೆಸಿದ್ದರು. ಈಗಲೂ ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿನ
ಜನರು ಚಾತಕ ಪಕ್ಷಿ ತರಹ ಕಾಯುತ್ತಿದ್ದಾರೆ.